ಒಡಿಶಾ: ತೈಲ ಟ್ಯಾಂಕರ್ ಸ್ಫೋಟಗೊಂಡು 4 ಮಂದಿ ಸಜೀವ ದಹನ, ಓರ್ವ ಗಂಭೀರ

Photo: India Today
ಭುವನೇಶ್ವರ: ಒಡಿಶಾದ ನಯಾಗಢದಲ್ಲಿ ಶನಿವಾರ ಮುಂಜಾನೆ ಇಂಧನ ತುಂಬಿದ ಟ್ಯಾಂಕರ್ ವೊಂದು ಸೇತುವೆಯಿಂದ ಸ್ಕಿಡ್ ಆಗಿ ಸ್ಫೋಟಗೊಂಡ ಪರಿಣಾಮ ಕನಿಷ್ಠ ನಾಲ್ವರು ಸಜೀವ ದಹನಗೊಂಡರು ಹಾಗೂ ಒಬ್ಬರು ಗಂಭೀರವಾಗಿ ಗಾಯಗೊಂಡರು ಎಂದು India Today ವರದಿ ಮಾಡಿದೆ.
ಮೃತರನ್ನು ಪಂಕಜ್ ನಯಾಜ್, ದೀಪು ಖತುವಾ, ಸಮೀರ್ ನಾಯಕ್ ಹಾಗೂ ಚಂದನ್ ಖತುವಾ ಎಂದು ಗುರುತಿಸಲಾಗಿದೆ. ನಾಲ್ವರೂ ನಯಾಗಢ ಪ್ರದೇಶದವರಾಗಿದ್ದಾರೆ.
ವರದಿಗಳ ಪ್ರಕಾರ, ಇಂಧನ ಟ್ಯಾಂಕರ್ ಪರದೀಪ್ನಿಂದ ಸಂಬಲ್ಪುರಕ್ಕೆ ತೆರಳುತ್ತಿತ್ತು. ಬೆಳಗಿನ ಜಾವ 1.45ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿದ ವಾಹನ ಸೇತುವೆಯ ಬೇಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ನಂತರ ಟ್ಯಾಂಕರ್ ಸೇತುವೆಯಿಂದ ಕೆಳಕ್ಕೆ ಬಿದ್ದು ಕುಸುಮಿ ನದಿಗೆ ಧುಮುಕಿತು.
ನಂತರ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಆದರೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಸಂಪೂರ್ಣ ತೈಲ ತುಂಬಿದ್ದ ಟ್ಯಾಂಕರ್ ಸ್ಫೋಟಗೊಂಡು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರ ಪೈಕಿ ನೆರವಿಗೆ ಬಂದ ಇಬ್ಬರು ಸ್ಥಳೀಯರು ಸೇರಿದ್ದು, ಟ್ಯಾಂಕರ್ ಚಾಲಕ ಹಾಗೂ ಸಹಾಯಕ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.