ಎಸ್‌ಇಝೆಡ್-ಎಂಆರ್‌ಪಿಎಲ್ ಕಾರಿಡಾರ್ ರಸ್ತೆ ಹೊಂಡಮಯ

ಮಂಗಳೂರು: ಎಸ್‌ಇಝೆಡ್, ಎಂಆರ್‌ಪಿಎಲ್‌ಗೆ ತಲುಪುವ ಕಾರಿಡಾರ್ ರಸ್ತೆಯು ಹೊಂಡಮಯವಾಗಿದೆ ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಆರೋಪಿಸಿದೆ.
ಇಲ್ಲಿನ ರುಚಿ ಗೋಲ್ಡ್, ಅದಾನಿ ವಿಲ್ಮಾ ಬಳಿ ಆಳೆತ್ತರದ ಹೊಂಡಗಳು ನಿರ್ಮಾಣಗೊಂಡಿವೆ. ಆರಂಭದಲ್ಲಿ ಎಸ್‌ಇಝಡ್‌ನವರು ಕುದುರೆಮುಖ ಕೈಗಾರಿಕಾ ಘಟಕದ ಬಳಿಯಿಂದ ಈ ರಸ್ತೆಯನ್ನು ನಿರ್ಮಿಸಿದರು. ಪಲ್ಗುಣಿ ನದಿಯ ದಂಡೆಯನ್ನು ಆಕ್ರಮಿಸಿ ರಸ್ತೆ ನಿರ್ಮಿಸುವಾಗ ನಾಗರಿಕರು ಹೋರಾಟ ನಡೆಸಿ ಕೆಲವರು ಜೈಲಿಗೂ ಹೋಗಿ ಬಂದಿದ್ದರು. ಜಿಲ್ಲಾಡಳಿತವು ಕಂಪೆನಿಯ ಜೊತೆ ನಿಂತಿತ್ತು. ಆದರೆ ಅದೇ ರಸ್ತೆ ಈಗ ಅನಾಥವಾಗಿದೆ ಎಂದು ಸಮಿತಿ ತಿಳಿಸಿದೆ.
ಸೆಝ್‌ನವರು ಈಗ ತಮ್ಮದೇ ಹೊಸ ಮೇಲ್ಸೇತುವೆ ನಿರ್ಮಿಸಿದ್ದಾರೆ. ಈ ರಸ್ತೆ ನಮಗೀಗ ಅಗತ್ಯ ಇಲ್ಲ ಎಂಬುದು ಅವರ ಹೇಳಿಕೆಯಾಗಿದೆ. ಇನ್ನು ಎಂಆರ್‌ಪಿಎಲ್‌ನ ಪೈಪ್‌ಲೈನ್‌ಗಳು ಈ ರಸ್ತೆಯಲ್ಲಿ ಹಾದು ಹೋಗುತ್ತದೆ. ಜೊತೆಗೆ ಮೂರನೇ ಹಂತದ ಘಟಕದ ನೂರಾರು ವಾಹನಗಳು ಕೂಡ ಈ ರಸ್ತೆಯಲ್ಲಿ ಹಾದು ಹೋಗಲಿದೆ. ಅದಲ್ಲದೆ ಅದಾನಿ ವಿಲ್ಮಾ, ರುಚಿ ಗೋಲ್ಡ್ ಕೈಗಾರಿಕಾ ಘಟಕದ ಬಳಿ ಅಸಮರ್ಪಕ ಡ್ರೈನೇಜ್ ನಿರ್ವಹಣೆಯಿಂದ ರಸ್ತೆ ಹದಗೆಟ್ಟಿದೆ ಎಂದು ಸಮಿತಿ ಆರೋಪಿಸಿದೆ.
ದ.ಕ.ಜಿಲ್ಲಾಡಳಿತ ಈ ಭಾಗದ ಪರಿಸರ, ನದಿ ಮಾಲಿನ್ಯದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಸ್ಥಳೀಯ ನಾಗರಿಕರ ಓಡಾಟಕ್ಕೆ ಕಷ್ಟವಾಗಿದೆ. ಸಮಸ್ಯೆಗೆ ಶೀಘ್ರ ಪರಿಹಾರ ಸಿಗದಿದ್ದಲ್ಲಿ ಹೋರಾಟ ಮಾಡಲಿದೆ ಎಂದು ಸಮಿತಿ ಎಚ್ಚರಿಸಿದೆ.