ಉಡುಪಿ ಮಿಷನ್ ಆಸ್ಪತ್ರೆ ಶತಮಾನೋತ್ಸವ ಸಂಭ್ರಮ ಉದ್ಘಾಟನೆ
ಉತ್ತಮ ಚಿಕಿತ್ಸೆ ನೀಡುವುದೇ ನಿಜವಾದ ಆರೋಗ್ಯ ಸೇವೆ: ಬಿಷಪ್

ಉಡುಪಿ, ಜೂ.15: ಇಂದು ಸಮಾಜ ಬದಲಾಗುತ್ತಿದೆ. ಹೊಸ ಹೊಸ ರೋಗಗಳು ಹಾಗೂ ವಿಧಾನಗಳು ಕೂಡ ಬರುತ್ತಿದೆ. ಜನರಿಗೆ ಉತ್ಕೃಷ್ಟ ಮಟ್ಟದ ಆರೋಗ್ಯ ಸೇವೆ ನೀಡಬೇಕಾದರೆ ಆಸ್ಪತ್ರೆಗಳು ಕೂಡ ಉತ್ಕೃಷ್ಟವಾಗಬೇಕು. ಆಸ್ಪತ್ರೆಗಳು ಉತ್ತಮ ಚಿಕಿತ್ಸೆ ನೀಡುವುದರೊಂದಿಗೆ ರೋಗಿಗಳ ಸಂಖ್ಯೆ ಕಡಿಮೆ ಮಾಡುವುದೇ ನಿಜವಾದ ಆರೋಗ್ಯ ಸೇವೆ ಆಗಿದೆ ಎಂದು ಉಡುಪಿ ಧರ್ಮ ಪ್ರಾಂತ್ಯದ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೋ ಹೇಳಿದ್ದಾರೆ.
ಉಡುಪಿ ಲೊಂಬಾರ್ಡ್ ಸ್ಮಾರಕ(ಮಿಷನ್) ಆಸ್ಪತ್ರೆಯ ಶತಮಾನೋತ್ಸವ ವರ್ಷಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನರ್ಸಿಂಗ್ ಕಾಲೇಜಿನ ಹೊಸ ಬ್ಲಾಕ್ನ್ನು ಉದ್ಘಾಟಿಸಿದ ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದ ಕುಲಪತಿ ಮತ್ತು ನಿಟ್ಟೆ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ವಿನಯ್ ಹೆಗ್ಡೆ ಮಾತನಾಡಿ, ವೈದ್ಯಕೀಯ ಕಾಲೇಜು ಮತ್ತು ನರ್ಸಿಂಗ್ ಕಾಲೇಜು ಆಸ್ಪತ್ರೆಗಳಿಗೆ ಪೂರಕವಾಗಿದ್ದು, ಅವುಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಹಾಕಿಕೊಳ್ಳಬೇಕು. ಶಿಕ್ಷಣಕ್ಕೆ ಪೂರಕವಾಗಿರುವ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ವಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಮಾತನಾಡಿ, ಶತ ಮಾನೋತ್ಸವ ಆಚರಿಸುತ್ತಿರುವ ಈ ಆಸ್ಪತ್ರೆಯು ಮುಂದಿನ 100ವರ್ಷಗಳ ಯೋಜನೆಯನ್ನು ಇಂದಿನಿಂದಲೇ ಹಾಕಿಕೊಳ್ಳಬೇಕು. ಆ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ವಹಿಸಿದ್ದರು. ಮಿಷನ್ ಆಸ್ಪತ್ರೆ ಚಾಪೆಲ್ನಲ್ಲಿ ಸಿಎಸ್ಐ ಕರ್ನಾಟಕ ದಕ್ಷಿಣ ಧರ್ಮ ಪ್ರಾಂತ್ಯದ ಉಪಾಧ್ಯಕ್ಷೆ ವಂ.ಭಗಿನಿ ಸುಜಾತಾ, ಕೆಎಸ್ಡಿ ಕಾರ್ಯದರ್ಶಿ ವಿಲಿಯಂ ಕ್ಯಾರೆ, ಕೋಶಾಧಿಕಾರಿ ವಿನ್ಸೆಂಟ್ ಪಾಲನ, ಕ್ರಿಶ್ಚಿಯನಂ ಮೆಡಿಕಲ್ ಆ್ಯಂಡ್ ಎಜ್ಯು ಕೇಶನಲ್ ಫೆಲೋಶಿಪ್ ಟ್ರಸ್ಟ್ನ ಸ್ಟಾನ್ಲಿ ಕರ್ಕಡ, ನಗರಸಭಾ ಸದಸ್ಯ ರಮೇಶ್ ಕಾಂಚನ್, ಉದ್ಯಮಿ ಮುಹಮ್ಮದ್ ವೌಲಾ, ಜಮಿಯ್ಯುತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾ ಅಧ್ಯಕ್ಷ ಶಭಿ ಅಹ್ಮದ್ ಕಾಝಿ, ಪ್ರಸೂತಿ ತಜ್ಞೆ ಡಾ.ದೀಪಾ ರಾವ್ ಮೊದಲಾದವರು ಉಪಸ್ಥಿತರಿದ್ದರು.ರೆ.ಐವನ್ ಸೋನ್ಸ್ ಪ್ರಾರ್ಥನೆ ನೆರವೇರಿಸಿದರು. ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಸುಜಾತ ಕರ್ಕಡ ಸ್ವಾಗತಿಸಿದರು. ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಡೀನ್ ಪ್ರಭಾವತಿ ವಂದಿಸಿದರು.
