ಮಳಲಿ ಮಸೀದಿ ವಿವಾದ; ಜೂ.22ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ

ಮಂಗಳೂರು, ಜೂ.17: ಮಳಲಿ ಜುಮಾ ಮಸೀದಿಯ ವಿವಾದಕ್ಕೆ ಸಂಬಂಧಿಸಿದಂತೆ ನಗರದ ಮೂರನೇ ಸಿವಿಲ್ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜೂನ್ 22ಕ್ಕೆ ಮುಂದೂಡಿದೆ.
ಸ್ಥಳೀಯರಾದ ಧನಂಜಯ ಮತ್ತು ಮನೋಜ್ ಕುಮಾರ್ ದಾಖಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಮೂರನೇ ಸಿವಿಲ್ ನ್ಯಾಯಾಲಯವು ಶುಕ್ರವಾರ ಎರಡೂ ಕಡೆಯ ವಾದ ಪ್ರತಿವಾದ ಆಲಿಸಿತು.
ಮಸೀದಿಯ ಪರ ವಕಾಲತ್ತು ನಡೆಸಿದ ವಕೀಲರು ಪ್ರಕರಣವು ಸಿವಿಲ್ ನ್ಯಾಯಾಲಯ ವ್ಯಾಪ್ತಿಗೆ ಬರುವುದಿಲ್ಲ. ಮಸೀದಿ ವಕ್ಫ್ ಆಸ್ತಿಯಾಗಿರುವುದರಿಂದ ವಕ್ಫ್ ನ್ಯಾಯಾಲಯ ವ್ಯಾಪ್ತಿಗೆ ಬರುತ್ತದೆ ಎಂದು ಮತ್ತೆ ಪ್ರತಿಪಾದಿಸಿದರು.
ಅದರಂತೆ ಪ್ರಕರಣವು ಸಿವಿಲ್ ನ್ಯಾಯಾಲಯದ ಪರಿಧಿಯಲ್ಲಿ ಇದೆಯೇ ಅಥವಾ ವಕ್ಫ್ ನ್ಯಾಯಾಲಯದ ಅಧೀನಕ್ಕೆ ಬರುತ್ತದೆಯೇ ಎಂಬ ಬಗ್ಗೆ ತೀರ್ಪು ನೀಡುವುದಾಗಿ ಸಿವಿಲ್ ನ್ಯಾಯಾಲಯ ಘೋಷಿಸಿತ್ತು.
ಈ ಮಧ್ಯೆ ಧನಂಜಯ ಮತ್ತು ಇತರರು ಹೈಕೋರ್ಟ್ ಮೊರೆ ಹೋಗಿ ಪ್ರಕರಣ ಸಂಬಂಧ ಯಾವುದೇ ಆದೇಶಗಳನ್ನು ನೀಡದಂತೆ ಸಿವಿಲ್ ನ್ಯಾಯಾಲಯಕ್ಕೆ ಸೂಚನೆ ನೀಡಬೇಕೆಂದು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ತಾನು ಸೂಚನೆ ನೀಡುವವರೆಗೆ ಯಾವುದೇ ತೀರ್ಪು ಪ್ರಕಟಿಸಿದಂತೆ ಮಂಗಳೂರಿನ ಸಿವಿಲ್ ನ್ಯಾಯಾಲಯಕ್ಕೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಸಿವಿಲ್ ನ್ಯಾಯಾಲಯವು ಹೈಕೋರ್ಟ್ ನ ತೀರ್ಪು ಬಾರದಿರುವ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಜೂ. 22ಕ್ಕೆ ಮುಂದೂಡಿ ಆದೇಶಿಸಿದೆ.