ಈಶಾನ್ಯದಲ್ಲಿ ನಿಲ್ಲದ ಮಳೆ ಅಬ್ಬರ; ಮತ್ತೆ 11 ಮಂದಿ ಮೃತ್ಯು

(PTI)
ಸಿಲ್ಚೇರ್/ಶಿಲ್ಲಾಂಗ್/ಅಗರ್ತಲ: ಈಶಾನ್ಯ ಭಾರತದಲ್ಲಿ ಭಾರಿ ಮಳೆ ಮುಂದುವರಿದಿದ್ದು, ಭೂಕುಸಿತ ಮತ್ತು ಪ್ರವಾಹದಿಂದಾಗಿ ಕಳೆದ 24 ಗಂಟೆಗಳಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ.
ಪಶ್ಚಿಮ ಬಂಗಾಳದ ಹಿಮಾಲಯನ್ ಪ್ರದೇಶ ಮತ್ತು ಸಿಕ್ಕಿಂ ಸೇರಿದಂತೆ ಎಲ್ಲ ಈಶಾನ್ಯ ರಾಜ್ಯಗಳಲ್ಲಿ ಮುಂದಿನ ಐದು ದಿನಗಳಲ್ಲಿ ವ್ಯಾಪಕ ಮಳೆ ಮುಂದುವರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಸ್ಸಾಂನಲ್ಲಿ ಶುಕ್ರವಾರ ಏಳು ಮಂದಿ ಮಳೆ ಸಂಬಂಧಿ ಅನಾಹುತಗಳಿಗೆ ಬಲಿಯಾಗುವುದರೊಂದಿಗೆ ಕಳೆದ ಮೂರು ದಿನಗಳಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೇರಿದೆ. ಗುವಾಹತಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೂರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸತತ ಮೂರು ದಿನಗಳಿಂದ ಪ್ರವಾಹ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಗುವಾಹತಿ, ಕರ್ಮುಪ್, ಗೋಲ್ಪಾರ, ಕೊಕ್ರಜಾರ್, ಮೊರಿಗಾಂವ್, ನಲ್ಬರಿ, ಉದಲಗುರಿ ತೀವ್ರ ನೆರೆ ಪೀಡಿತವಾಗಿರುವ ಪ್ರದೇಶಗಳು. ಇದರಿಂದಾಗಿ ಸುಮಾರು 70 ಸಾವಿರ ಮಂದಿ ನಿರಾಶ್ರಿತರಾಗಿದ್ದು, 196 ಪರಿಹಾರ ಶಿಬಿರಗಳಲ್ಲಿ ಆಸರೆ ಪಡೆದಿದ್ದಾರೆ ಎಂದು ಅಸ್ಸಾಮ ರಾಜ್ಯ ವಿಕೋಪ ನಿರ್ವಹಣೆ ಪಡೆ ಪ್ರಕಟಿಸಿದೆ.
ಭಾರಿ ಮಳೆಯಿಂದಾಗಿ ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳಲ್ಲಿ ನೆರೆ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಹಲವು ಕಡೆಗಳಲ್ಲಿ ರೈಲು ಹಳಿಗಳು ಕೊಚ್ಚಿಕೊಂಡು ಹೋಗಿದ್ದು, ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.
ಮೇಘಾಲಯದಲ್ಲಿ ದಕ್ಷಿಣ ಗರೊ ಹಿಲ್ಸ್ ಹಿಲ್ಲೆಯಲ್ಲಿ ನಾಲ್ಕು ಮಂದಿ ಮಳೆ ಸಂಬಂಧಿ ಅನಾಹುತಗಳಿಗೆ ಬಲಿಯಾಗಿದ್ದಾರೆ. ಮೂರು ಮಂದಿ ಬಘಮಾರ ಹಾಗೂ ಒಬ್ಬರು ಸಿಜು ಎಂಬಲ್ಲಿ ಮೃತಪಟ್ಟಿದ್ದಾರೆ.