ದೇಶದಲ್ಲಿ 10 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ : ಅಂಕಿ ಅಂಶ

ಹೊಸದಿಲ್ಲಿ: ದೇಶದಲ್ಲಿ ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳ ಖಾಲಿ ಹುದ್ದೆಗಳ ಸಂಖ್ಯೆ ಇದೀಗ 10 ಲಕ್ಷಕ್ಕೇರಿದೆ. ಇದು ಹಿಂದಿನ ನಾಲ್ಕು ವರ್ಷಗಳ ಹಿಂದೆ ಇದ್ದ ಖಾಲಿ ಹುದ್ದೆಗಳ ಎರಡು ಪಟ್ಟು ಎಂದು timesofindia.com ವರದಿ ಮಾಡಿದೆ.
ಕೇಂದ್ರ ಸರ್ಕಾರದ ವೆಚ್ಚ ಇಲಾಖೆಯ ವೇತನ ಮತ್ತು ಭತ್ಯೆ ಕುರಿತ ವಾರ್ಷಿಕ ವರದಿಯ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 8.9 ಲಕ್ಷ ನಾಗರಿಕ ಹುದ್ದೆಗಳು ಮತ್ತು ಗೃಹ ಸಚಿವಾಲಯ ವ್ಯಾಪ್ತಿಯಲ್ಲಿ ಬರುವ ಕೇಂದ್ರೀಯ ಪೊಲೀಸ್ ಪಡೆಗಳಲ್ಲಿ 1.1 ಲಕ್ಷ ಹುದ್ದೆಗಳು ಖಾಲಿ ಇವೆ. 2019ರಲ್ಲಿ ಕೂಡಾ 10 ಲಕ್ಷ ಭರ್ತಿಯಾಗದ ಹುದ್ದೆಗಳು ಇದ್ದವು.
ನಾಗರಿಕ ಸೇವೆ ಮತ್ತು ಕೇಂದ್ರೀಯ ಪೊಲೀಸ್ ಪಡೆಗಳ ಖಾಲಿ ಹುದ್ದೆಗಳ ಅಂಕಿ ಅಂಶ 2006ರಿಂದ ಲಭ್ಯವಿದ್ದು, 2006ರಲ್ಲಿ ಖಾಲಿ ಹುದ್ದೆಗಳ ಸಂಖ್ಯೆ 4.7 ಲಕ್ಷದಷ್ಟಿತ್ತು. 2010ರ ವೇಳೆಗೆ ಖಾಲಿ ಹುದ್ದೆಗಳ ಸಂಖ್ಯೆ ಗಣನೀಯವಾಗಿ ಏರಿ 2013ರ ವರೆಗೂ ಅದೇ ಮಟ್ಟದಲ್ಲಿತ್ತು. ಮುಂದಿನ ಎರಡು ವರ್ಷಗಳ ಕಾಲ ಖಾಲಿ ಹುದ್ದೆಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂತು. 2016ರಲ್ಲಿ 4.7 ಲಕ್ಷ ಇದ್ದ ಖಾಲಿ ಹುದ್ದೆಗಳ ಸಂಖ್ಯೆ 2018ರಲ್ಲಿ 7 ಲಕ್ಷ ಹಾಗೂ 2019ರಲ್ಲಿ 10 ಲಕ್ಷ ತಲುಪಿದೆ.
ಖಾಲಿ ಇರುವ ನಾಗರಿಕ ಹುದ್ದೆಗಳ ಅಂಕಿ ಅಂಶ 2001ರಿಂದ ಲಭ್ಯವಿದ್ದು, ಆ ವೇಳೆಗೆ ಮಂಜೂರಾದ ಹುದ್ದೆಗಳ ಪ್ರಮಾಣಕ್ಕೆ ಹೋಲಿಸಿದರೆ ಖಾಲಿ ಹುದ್ದೆಗಳ ಸಂಖ್ಯೆ ಶೇಕಡ 5ರಷ್ಟಿತ್ತು. ಆದರೆ ಇದೀಗ ಈ ಪ್ರಮಾಣ ಶೇಕಡ 21.7ಕ್ಕೇರಿದೆ. 2001ರಲ್ಲಿ ಕೇಂದ್ರ ಸರ್ಕಾರದ ಮಂಜೂರಾದ ಹುದ್ದೆಗಳು 36.1 ಲಕ್ಷ ಆಗಿದ್ದು, ಈ ಪೈಕಿ 1.8 ಲಕ್ಷ ಹುದ್ದೆಗಳು ಖಾಲಿ ಇದ್ದವು. ಇದೀಗ ಮಂಜೂರಾದ ಹುದ್ದೆಗಳ ಸಂಖ್ಯೆ 40.8 ಲಕ್ಷ ಇದ್ದರೆ ಖಾಲಿ ಹುದ್ದೆಗಳ ಸಂಖ್ಯೆ 8.9 ಲಕ್ಷ ಆಗಿದೆ.