ಉಡುಪಿ ಜಿಲ್ಲೆಯ ಕೋವಿಡ್ ಲಸಿಕಾ ಪ್ರಗತಿ ಹೆಚ್ಚಿಸಲು ಲಸಿಕಾಮಿತ್ರ 2.0
ಉಡುಪಿ : ಜಿಲ್ಲೆಯಲ್ಲಿ ಕೋವಿಡ್-೧೯ ಸಂಭಾವ್ಯ 4ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಲಸಿಕಾಕರಣ ಪ್ರಗತಿಯ ವೇಗವನ್ನು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಮನೆ ಮನೆಗೆ ಲಸಿಕಾ ಮಿತ್ರ-೨.೦ ಲಸಿಕಾಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜೂನ್ ಮತ್ತು ಜುಲೈ ತಿಂಗಳಲ್ಲಿ ಕೋವಿಡ್ ಲಸಿಕಾಕರಣವನ್ನು ಪರಿಣಾಮ ಕಾರಿಯಾಗಿ ಅನುಷ್ಠಾನ ಮಾಡಲು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ೧೨ರಿಂದ ೧೪ವರ್ಷ ವಯಸ್ಸಿನ ಮಕ್ಕಳು, ೧೫ರಿಂದ ೧೭ವರ್ಷ ವಯಸ್ಸಿನ ಮಕ್ಕಳು, ೧೮ ವರ್ಷ ಮೇಲ್ಪಟ್ಟ ನಾಗರಿಕರು ಪ್ರಥಮ ಹಾಗೂ ದ್ವಿತೀಯ ಡೋಸ್ ಪಡೆಯಲು ಬಾಕಿ ಇರುವವರು, ೬೦ ವರ್ಷ ಮೇಲ್ಪಟ್ಟವರು, ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಲ್ಲಿ ಮುನ್ನೆಚ್ಚರಿಕಾ ಡೋಸ್ ಪಡೆಯಲು ಬಾಕಿ ಇರುವವರನ್ನು ಗುರುತಿಸಿ, ಅವರ ಮನವೊಲಿಸಿ, ಶಾಲೆ ಅಥವಾ ಆಸ್ಪತ್ರೆಯ ಸೆಷನ್ನಲ್ಲಿ ಕೋವಿಡ್ ಲಸಿಕೆ ಪಡೆಯಲು ಜಾಗೃತಿ ಮೂಡಿಸಿ ಮನವೊಲಿಸಲಿದ್ದಾರೆ.
ಮುಂಚೂಣಿ ಕಾರ್ಯಕರ್ತರ ಮೂಲಕ, ಮೊದಲನೇ ಡೋಸ್ ಪಡೆಯದ ಹಾಗೂ ಎರಡನೇ ಡೋಸ್ ಪಡೆಯಲು ಬಾಕಿ ಇರುವ ೧೨ ವರ್ಷ ಮೇಲ್ಪಟ್ಟ ಎಲ್ಲಾ ಅರ್ಹ ಫಲಾನುಭಗಳ ಮನೆಗೆ ಭೇಟಿ ನೀಡಿ, ಪ್ರತಿಯೊಬ್ಬ ಫಲಾನುಭವಿ ಯನ್ನು ಸಂದರ್ಶಿಸಿ, ಕೇಂದ್ರ ಸರಕಾರದಿಂದ ನೀಡಲಾಗುವ ಮಾರ್ಗಸೂಚಿ ಯನ್ವಯ ಕೋವಿಡ್-೧೯ ಲಸಿಕೆ ಪಡೆಯಬೇಕಾದವರ ಪಟ್ಟಿ ಸಿದ್ದಪಡಿಸಿ, ಅವರಲ್ಲಿ ಲಸಿಕೆ ಪಡೆಯಬೇಕಾದ ಅಗತ್ಯತೆಯ ಕುರಿತು ಜಾಗೃತಿ ಮೂಡಿಸಿ ಮನ ಒಲಿಸಿ ಸೂಕ್ತ ಸ್ಥಳದಲ್ಲಿ ಲಸಿಕಾಕರಣವನ್ನು ಏರ್ಪಡಿಸಲು ಕ್ರಮ ಕೈಗೊಳ್ಳುತಿದ್ದಾರೆ.
ಕೋವಿಡ್ನಿಂದ ಸಂಪೂರ್ಣ ರಕ್ಷಣೆ ಪಡೆಯಲು ಎರಡೂ ಡೋಸ್ ಲಸಿಕೆ ಪಡೆಯುವುದು ಅತ್ಯವಶ್ಯಕ ಎಂಬ ಮಾಹಿತಿಯನ್ನು ಮನದಟ್ಟು ಮಾಡಿಸಿ, ಅವರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಮತ್ತು ಕೋವಿಡ್ ಸೋಂಕಿನ ಹೆಚ್ಚಿನ ಅಪಾಯದಲ್ಲಿರುವ ೬೦ ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್ನ ಅವಶ್ಯಕತೆ ಕುರಿತು ಜಾಗೃತಿ ಮೂಡಿಸಲಾಗುವುದು.
ಹೆಚ್ಚು ಜನಸಂದಣಿ ಇರುವ ಪ್ರದೇಶಗಳಾದ ಬಸ್, ರೈಲು, ಮೆಟ್ರೋ, ವಿಮಾನ ಹಾಗೂ ಬಂದರು ಪ್ರದೇಶಗಳಲ್ಲಿ ಮತ್ತು ಜನ ಸೇರುವ ಪ್ರದೇಶಗಳಾದ ಮಾರುಕಟ್ಟೆ, ಸಂತೆಗಳಲ್ಲಿ ಲಸಿಕಾಕರಣದ ಕುರಿತು ಜಾಗೃತಿ ಮೂಡಿಸಿ ಲಸಿಕಾಕರಣ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಾಪಿಸಿ ಲಸಿಕೆ ನೀಡಲು ಹಾಗೂ ಲಸಿಕೆ ಪಡೆಯಲು ತಪ್ಪಿಹೋದ ಮತ್ತು ಬಿಟ್ಟು ಹೋದ ಹಾಗೂ ಶಾಲೆಯಿಂದ ಹೊರಗುಳಿದ ೧೨ರಿಂದ ೧೭ ವರ್ಷದ ಮಕ್ಕಳನ್ನು ಗುರುತಿಸಿ, ಸೂಕ್ತ ಸ್ಥಳದಲ್ಲಿ ಲಸಿಕೆ ನೀಡಲು ಯೋಜನೆಯನ್ನು ರೂಪಿಸಲಾಗಿದೆ.
ಆಸ್ಪತ್ರೆಗೆ ಬರಲು, ನಡೆಯಲು ಸಾಧ್ಯವಾಗದ ಹಾಗೂ ಹಾಸಿಗೆ ಹಿಡಿದಿರುವ ೬೦ ವರ್ಷ ಮೇಲ್ಪಟ್ಟವರಿಗೆ ಮೊಬೈಲ್ ಲಸಿಕಾ ಶಿಬಿರವನ್ನು ವ್ಯವಸ್ಥೆ ಮಾಡಿ, ಲಸಿಕೆ ನೀಡಲು ನಿರ್ಧರಿಸಲಾಗಿದೆ.
ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ವೈದ್ಯಾಧಿಕಾರಿಗಳೊಂದಿಗೆ ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮ ಕಾರ್ಯಪಡೆಯ ಸದಸ್ಯರ ಸಮಿತಿ ಸಭೆ ನಡೆಸಿ, ಪ್ರಥಮ ಹಾಗೂ ದ್ವಿತೀಯ ಡೋಸ್ ಲಸಿಕೆ ಪಡೆಯಲು ಬಾಕಿ ಇರುವ ಮಕ್ಕಳು ಮತ್ತು ಮುನ್ನೆಚ್ಚರಿಕಾ ಡೋಸ್ ಪಡೆಯಲು ಬಾಕಿ ಇರುವ ಹಿರಿಯರನ್ನು ಗುರುತಿಸಿ ಲಸಿಕೆ ನೀಡಲು ಹಾಗೂ ಅಗತ್ಯವಿದ್ದಲ್ಲಿ ಸಂಬಂದಪಟ್ಟ ಗ್ರಾಪಂನಲ್ಲೇ ಬುಧವಾರ ಮೇಳದ ದಿನ ಲಸಿಕಾ ಶಿಬಿರವನ್ನು ಆಯೋಜಿಸಬೇಕು. ಒಂದು ವೇಳೆ ಲಸಿಕೆ ಪಡೆಯಲು ನಿರಾಕರಿಸಿದಲ್ಲಿ ಪಂಚಾಯತ್ ಕಾರ್ಯಪಡೆ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಸಮುದಾಯದ ಮುಖಂಡರುಗಳು ಮನವೊಲಿಸಿ, ಲಸಿಕೆ ಪಡೆಯುವಂತೆ ಪ್ರೇರೇಪಿಸಬೇಕು. ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು ಈ ಕುರಿತು ಕ್ರಮ ವಹಿಸಲಿದ್ದಾರೆ.
ಬುಧವಾರ ಲಸಿಕಾ ಮೇಳದ ಕುರಿತು ಗ್ರಾಮಗಳ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಸಹಕಾರ ಪಡೆದು, ಲಸಿಕಾ ಶಿಬಿರದ ಕುರಿತು ಮೈಕ್ ಮೂಲಕ ಪ್ರಚಾರ ನಡೆಸಿ ಲಸಿಕೆ ನೀಡಲಾಗುವುದು.
ಶೇ.೧೦೦ ಸಾಧನೆ: ಜಿಲ್ಲೆಯಲ್ಲಿ ಇದುವರೆಗೆ ೧೮ ವರ್ಷ ಮೇಲ್ಪಟ್ಟವರಿಗೆ ನೀಡುವ ಮೊದಲ ಡೋಸ್ ಲಸಿಕೆಯನ್ನು ೧೦,೦೪,೪೯೫ ಮಂದಿಗೆ ನೀಡಿ ಶೇ.೧೦೦.೫೫ ಹಾಗೂ ಎರಡನೇ ಡೋಸ್ನ್ನು ೯,೯೮,೩೫೪ ಮಂದಿಗೆ ನೀಡಿ ಶೇ.೯೯.೯೪ ಸಾಧನೆ ಮಾಡಲಾಗಿದೆ. ೧೫-೧೮ ರ ವಯೋಮಾನದಲ್ಲಿ ೪೯,೧೮೬ ಮಂದಿಗೆ ಪ್ರಥಮ ಡೋಸ್ ನೀಡಿ ಶೇ.೯೧.೮೪ ಹಾಗೂ ೪೭,೯೦೬ ಮಂದಿಗೆ ಎರಡನೇ ಡೋಸ್ ನೀಡಿ ಶೇ.೮೯.೪೫ ಸಾಧನೆ ಮಾಡಲಾಗಿದೆ. ೧೨-೧೪ರ ವಯೋಮಾನದಲ್ಲಿ ೩೩,೫೮೩ ಮಂದಿಗೆ ಪ್ರಥಮ ಡೋಸ್ ನೀಡಿ ಶೇ.೧೦೮.೫೬ ಹಾಗೂ ೨೭,೧೧೩ ಮಂದಿಗೆ ಎರಡನೇ ಡೋಸ್ ನೀಡಿ ಶೇ.೮೭.೬೫ ಸಾಧನೆ ಆಗಿದೆ.
೧೫,೭೫೦ಆರೋಗ್ಯ ಕಾರ್ಯಕರ್ತರು, ೪೩೧೬ ಮುಂಚೂಣಿ ಕಾರ್ಯಕರ್ತರು ಹಾಗೂ ೬೩,೦೪೪ ಮಂದಿ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕಾ ಡೋಸ್ ಕೋವಿಡ್-೧೯ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
"ಜಿಲ್ಲೆಯಲ್ಲಿ ಕೋವಿಡ್ ಸಂಭಾವ್ಯ ೪ನೇ ಅಲೆಯನ್ನು ಎದುರಿಸುವ ಕುರಿತಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ. ಕೋವಿಡ್-೧೯ನ್ನು ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯುವುದು ಅತ್ಯಂತ ಅಗತ್ಯವಿದ್ದು, ಜಿಲ್ಲೆಯಲ್ಲಿ ಲಸಿಕೆ ನೀಡುವಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ಮನೆ ಮನೆಗೆ ಲಸಿಕಾ ಮಿತ್ರ ೨.೦ ಕಾರ್ಯಕ್ರಮ ಮತ್ತು ಬುಧವಾರದಂದು ನಡೆಯುವ ಕೋವಿಡ್ ಲಸಿಕಾ ಮೇಳವನ್ನು ಪರಿಣಾಮಕಾರಿಯಾಗಿ ನಡೆಸಿ ಕೋವಿಡ್-೧೯ ವ್ಯಾಕ್ಸಿನೇಷನ್ನಲ್ಲಿ ನೂರರಷ್ಟು ಪ್ರಗತಿ ಸಾಧಿಸುವಂತೆ ಸಂಬಂದಪಟ್ಟ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ".
-ಕೂರ್ಮಾರಾವ್ ಎಂ., ಜಿಲ್ಲಾಧಿಕಾರಿ ಉಡುಪಿ.