ಪರ್ಕಳ ಕೋಡಂಗೆ ರಸ್ತೆ ಅಸಮರ್ಪಕ ಕಾಮಗಾರಿ ಆರೋಪ: ಪಾದಯಾತ್ರೆ, ಪ್ರತಿಭಟನೆ

ಮಣಿಪಾಲ : ಪರ್ಕಳ ಗ್ಯಾಟ್ಸನ್ ಸರ್ಕಲ್ ಬಳಿಯ ಬಿಎಸ್ ಎನ್ಎಲ್ ಕಚೇರಿಯಿಂದ ಕೋಡಂಗೆಯ ಶ್ರೀರಾಮ ಭಜನಾ ಮಂದಿರವರೆಗೆ ಹೊಸ ರಸ್ತೆ ನಿರ್ಮಿಸುವ ಉದ್ದೇಶದಿಂದ ಹಳೆ ರಸ್ತೆಯನ್ನು ಅಗೆದು ಕೆಸರುಮಯ ವನ್ನಾಗಿಸಿರುವುದನ್ನು ವಿರೋಧಿಸಿ ಸ್ಥಳೀಯರು ಶನಿವಾರ ಪಾದಯಾತ್ರೆ ನಡೆಸಿ ಪ್ರತಿಭಟಿಸಿದರು.
ಹೊಸ ರಸ್ತೆ ನಿರ್ಮಿಸುವುದಕ್ಕಾಗಿ ಇಲ್ಲಿನ ಸುಮಾರು ೭೦೦ಮೀಟರ್ ಡಾಮರು ರಸ್ತೆಯನ್ನು ಕೆಡವಿ ಹಾಕಲಾಗಿದ್ದು, ಎರಡು ತಿಂಗಳು ಕಳೆದರೂ ರಸ್ತೆ ಕಾಮಗಾರಿ ನಡೆಸದ ಪರಿಣಾಮ ಮಳೆಯಿಂದ ಇಡೀ ರಸ್ತೆ ಕೆಸರುಮಯ ವಾಗಿದೆ. ಇದರಿಂದ ಸಾರ್ವಜನಿಕರು ಈ ರಸ್ತೆಯಲ್ಲಿ ತಿರುಗಾಡಲು ಆಗದಂತಹ ಪರಿಸ್ಥತಿ ಉದ್ಭವಿಸಿದೆ. ಶಾಲಾ ಮಕ್ಕಳು ಇದೇ ಕೆಸರುಮಯ ರಸ್ತೆಯಲ್ಲಿ ನಡೆದು ಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಕಾರರು ದೂರಿದರು.
ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟ ಸ್ಥಳೀಯರೊಬ್ಬರ ಪಾರ್ಥಿವ ಶರೀರ ಕೊಂಡೊಯ್ಯಲು ಕೂಡ ಸಾಕಷ್ಟು ಸಮಸ್ಯೆಯಾಗಿದೆ. ರಸ್ತೆಯ ಕೊಳಕು ನೀರು ಹರಿದು ಸ್ಥಳೀಯ ಬಾವಿ ನೀರು ಕೆಸರುಮಯವಾಗಿದೆ. ರಸ್ತೆ ಅಗೆತದಿಂದ ನಗರಸಭೆಯ ನೀರಿನ ಸಂಪರ್ಕವನ್ನು ಕಡಿತಗೊಂಡಿದ್ದು, ಬಿಎಸ್ಎನ್ಎಲ್ ದೂರವಾಣಿ ಸಂಪರ್ಕ ಸ್ತಬ್ಧಗೊಂಡಿದೆ ಎಂದು ಸ್ಥಳೀಯರು ಆರೋಪಿಸಿದರು.
ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ. ರಸ್ತೆಯ ಕೆಲಸ ಮಾಡುವವರಿಗೆ ಇದರ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಸರಿಯಾಗಿ ಮಾಹಿತಿ ಇಲ್ಲದೆ ಕಾಮಗಾರಿ ನಡೆಸಲಾಗುತ್ತಿದೆ. ರಸ್ತೆ ನಿರ್ಮಾಣಕ್ಕೆ ತಂದಿರಿಸಲಾದ ನಾಲ್ಕು ಲಾರಿ ಸಿಮೆಂಟ್ ಹಾಳಾಗುವ ಪರಿಸ್ಥಿತಿ ಉದ್ದವಿಸಿದೆ. ಆದುದರಿಂದ ಇದೊಂದು ಪರ್ಸೆಂಟೇಜ್ ಕಾಮಗಾರಿ ಯಂತೆ ಕಾಣುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸ್ಥಳೀಯರಾದ ಮೋಹನ್ದಾಸ್ ನಾಯಕ್, ಪರ್ಕಳ ಸುಕೇಶ್ ಕುಂದರ್ ಹೆರ್ಗ, ಗಣೇಶ್ ರಾಜ್ ಸರಳೇಬೆಟ್ಟು, ಉಪೇಂದ್ರ ನಾಯ್ಕ, ದೇವೇಂದ್ರ ನಾಯ್ಕ, ಭೋಜಣ್ಣ ಕರ್ಕೇರ, ಸದಾನಂದ, ಅಪ್ಪು, ರಮೇಶ್ ನಾಯ್ಕ, ಉಮೇಶ್ ನಾಯ್ಕ, ಬಾಲಕೃಷ್ಣ ಶೆಟ್ಟಿ, ತಿಮ್ಮಪ್ಪಶೆಟ್ಟಿ ಹೆರ್ಗ, ರವಿ ಬೊಳ್ಜೆ, ಪದ್ಮಕ್ಕ, ಸಂತೋಷ್ ನಾಯ್ಕ, ಸಂತೋಷ್ ಎನ್., ಪ್ರಕಾಶ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
