ಭಾರತೀಯ ಸೇನೆಗೆ ‘ಅಗ್ನಿಪಥ್’ ಯೋಜನೆ ಮೂಲಕ ನೇಪಾಳಿ ಗೂರ್ಖಾಗಳ ನೇಮಕ

photo courtesy : Flickr
ಹೊಸದಿಲ್ಲಿ, ಜು. 7: 43 ಬೆಟಾಲಿಯನ್ಗಳನ್ನು ಒಳಗೊಂಡ ಭಾರತೀಯ ಸೇನೆಯ 7 ಗೂರ್ಖಾ ರೆಜಿಮೆಂಟ್ಗಳಿಗೆ ‘ಅಗ್ನಿಪಥ್’ ಯೋಜನೆ ಮೂಲಕ ನೇಪಾಳಿ ಗೂರ್ಖಾಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿರುವುದಾಗಿ The print ವರದಿ ಮಾಡಿದೆ. ನೇಪಾಳಿ ಗೂರ್ಖಾಗಳು ನೇಮಕಾತಿ ರ್ಯಾಲಿಯ ಬಗ್ಗೆ ಉತ್ಸುಕರಾಗಿದ್ದರು ಎಂದು ಫೀಡ್ಬ್ಯಾಕ್ ಬಹಿರಂಗಪಡಿಸಿದೆ ಎಂದು ಅದು ಹೇಳಿದೆ.
ಭಾರತೀಯ ಯೋಧರಿಗೆ ಅನ್ವಯವಾಗುವ ನಿಯಮಗಳಂತೆ ನೇಪಾಳಿ ಗೂರ್ಖಾಗಳನ್ನು ಕೂಡ ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತದೆ. ಇವರಲ್ಲಿ ಶೇ. 25 ಮಂದಿಯನ್ನು ದೀರ್ಘಾವಧಿಗೆ ಉಳಿಸಿಕೊಳ್ಳಲಾಗುತ್ತದೆ. ನೇಮಕಾತಿಗೆ ದಿನ ನಿಗದಿ ಮಾಡಲು ಭಾರತ, ನೇಪಾಳ ಹಾಗೂ ಬ್ರಿಟೀಶ್ ಸೇನೆಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಉತ್ತರಪ್ರದೇಶದ ಗೋರಖ್ಪುರ, ಪಶ್ಚಿಮಬಂಗಾಳದ ಡಾರ್ಜಿಲಿಂಗ್ನಲ್ಲಿ ಇರುವ ಎರಡು ಗೂರ್ಖಾ ನೇಮಕಾತಿ ಡಿಪೋ (ಜಿಆರ್ಡಿ)ಗಳ ಮೂಲಕ ನೇಪಾಳದ ಗೂರ್ಖಾಗಳ ನೇಮಕಾತಿ ನಡೆಯಲಿದೆ. ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟ್ನ 43 ಬೆಟಾಲಿಯನ್ ನೇಪಾಳದ ನಿವಾಸಿಗಳು ಹಾಗೂ ಭಾರತೀಯರನ್ನು ಒಳಗೊಂಡಿದೆ. ನೇಪಾಳಿಗಳು ಶೇ. 60ರಷ್ಟಿದ್ದರೆ, ಉಳಿದ ಶೇ. 40 ಭಾರತೀಯರು ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತದ ಭಾಗದಲ್ಲಿ ಉತ್ತರಾಖಂಡ, ಹಿಮಾಚಲಪ್ರದೇಶ, ಡಾರ್ಜಿಲಿಂಗ್, ಅಸ್ಸಾಂ ಹಾಗೂ ಮೇಘಾಲಯದ ಗೂರ್ಖಾಗಳ ನೇಮಕಾತಿ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.