VIDEO- ‘ಬಿಜೆಪಿಯದ್ದು ಘರ್ಜಿಸುವ ಸಿಂಹ... ಕಾಂಗ್ರೆಸ್ನದ್ದು ಮಲಗಿದ ಸಿಂಹ...’
ರಾಷ್ಟ್ರ ಲಾಂಛನ ವಿವಾದದ ಬಗ್ಗೆ ಸಿಎಂ ಬೊಮ್ಮಾಯಿ

ಮಣಿಪಾಲ, ಜು.೧೩: ಹೊಸದಿಲ್ಲಿಯ ನೂತನ ಸಂಸತ್ ಭವನದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ ರಾಷ್ಟ್ರೀಯ ಲಾಂಛನದ ಕುರಿತಂತೆ ಎದ್ದಿರುವ ವಿವಾದದ ಕುರಿತಂತೆ ಇಂದು ಇಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷಗಳು ಮೊಸರಿನಲ್ಲೂ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ ಎಂದು ಟೀಕಿಸಿದರು.
ಸಿಂಹದ ಲಾಂಛನ ಉಗ್ರವಾಗಿದೆ, ವ್ಯಗ್ರವಾಗಿದೆ ಎಂಬುದು ನೋಡುವವರ ದೃಷ್ಟಿಕೋನವಾಗಿದೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಈ ವಿಷಯವನ್ನು ರಾಜಕೀಯ ದೃಷ್ಟಿಯಿಂದ ನೋಡುತಿದ್ದಾರೆ. ಕ್ರಿಯಾಶೀಲವಾದ ಪ್ರಧಾನಿ ಇರುವ ನಮ್ಮ ಸಿಂಹ ಸಶಕ್ತವಾಗಿ ಘರ್ಜನಾ ರೂಪದಲ್ಲಿದೆ. ನಿದ್ದೆ ಮಾಡಿಕೊಂಡಿರುವ ಸಿಂಹವನ್ನೇ ನಂಬಿಕೊಂಡ ಸಂಸ್ಕೃತಿಯವರು ವಿರೋಧ ಪಕ್ಷದವರು ಎಂದು ಅವರು ವ್ಯಂಗ್ಯವಾಡಿದರು.
ಸಂಸತ್ ಮುಂದಿನ ರಾಷ್ಟ್ರ ಲಾಂಛನದ ಕುರಿತ ಚರ್ಚೆಗೆ ಈಗಾಗಲೇ ಸ್ಪಷ್ಟನೆ ನೀಡಲಾಗಿದೆ. ಸಾರನಾಥದಲ್ಲಿರುವ ಅಶೋಕನ ಕಾಲದಲ್ಲಿರುವ ಲಾಂಛನ ಅನುಕರಿಸಲಾಗಿದೆ. ಆ ಲಾಂಛನದಿಂದಲೇ ಸಿಂಹದ ಮುಖಚರ್ಯೆ ತೆಗೆದು ಕೊಳ್ಳಲಾಗಿದೆ. ಲಾಂಛನವನ್ನು ನಾವು ನೋಡುವ ದೃಷ್ಟಿಯಲ್ಲಿದೆ ಎಂದು ಬೊಮ್ಮಾಯಿ, ವ್ಯಗ್ರವಾಗಿದೆ, ಉಗ್ರವಾಗಿದೆ ಎಂಬುವುದು ಅವರವರ ದೃಷ್ಟಿಕೋನ ಸೂಚಿಸುತ್ತದೆ ಎಂದು ಸಮಜಾಯಿಷಿ ನೀಡಿದರು.
ಭಾರತಕ್ಕೆ ಈಗ ಕ್ರಿಯಾಶೀಲವಾಗಿರುವ, ಚುರುಕಾಗಿರುವ ಪ್ರಧಾನ ಮಂತ್ರಿಗಳಿ ದ್ದಾರೆ. ಅದಕ್ಕೆ ತಕ್ಕಂತೆ ಸಿಂಹ ಸಶಕ್ತರೂಪವಾಗಿದೆ. ಆದರೆ ಕಾಂಗ್ರೆಸ್ನವರು ನಿದ್ದೆ ಮಾಡಿಕೊಂಡೇ ಬಂದಂತಹ ಸಿಂಹವನ್ನು ನಂಬಿಕೊಂಡು ಬಂದವರು. ಆದ್ದರಿಂದ ಅವರಿಗೆ ಹಾಗೆ ಅನಿಸುತ್ತಿರಬೇಕು ಎಂದರು. ಇದರಲ್ಲಿ ಅವರು ಮೊಸರಲ್ಲಿ ಕಲ್ಲುಹುಡುಕುವ ಕೆಲಸ ಮಾಡುತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.