ಸ್ವಾತಂತ್ರ್ಯ ಸೇನಾನಿಗಳ ಸ್ಮರಣೆ: ಆಮಂತ್ರಣ ಪತ್ರಿಕೆ ಬಿಡುಗಡೆ

ಶಿರ್ವ, ಜು.14: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕದ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮದಡಿಯಲ್ಲಿ ಸ್ವಾತಂತ್ರ್ಯ ಸೇನಾನಿಗಳ ಸ್ಮರಣೆಯಲ್ಲಿ ಅಮೃತಾಂಜಲಿಸರಣಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ.ಬಂಟಕಲ್ಲು ಲಕ್ಷ್ಮೀನಾರಾಯಣ ಶರ್ಮಾರವರ ನಿವಾಸದಲ್ಲಿ ಬುಧವಾರ ಅವರ ಪುತ್ರ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಬಿಡುಗಡೆಗೊಳಿಸಿದರು.
ಈ ಸಂದರ್ದಲ್ಲಿ ಕಸಾಪ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಗೌರವ ಕಾರ್ಯದರ್ಶಿಗಳಾದ ನೀಲಾನಂದ ನಾಯ್ಕ್, ಅಶ್ವಿನ್ ಲಾರೆನ್ಸ್ ಮೂಡು ಬೆಳ್ಳೆ, ಕಸಾಪ ಉಡುಪಿ ಜಿಲ್ಲಾ ಕನ್ನಡ ಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಕಸಾಪ ತಾಲೂಕು ಸಮಿತಿ ಸದಸ್ಯರಾದ ಅನಂತ ಮೂಡಿತ್ತಾಯ ಶಿರ್ವ ಉಪಸ್ಥಿತರಿದ್ದರು.
ಕಾಪು ತಾಲೂಕು ವ್ಯಾಪ್ತಿಯ ಸ್ವಾತಂತ್ರ್ಯ ಹೋರಾಟಗಾರರ ಹುಟ್ಟಿದ ಮನೆಗಳ ಪರಿಸರಕ್ಕೆ ತೆರಳಿ ಅವರನ್ನು ಸಂಸ್ಮರಿಸುವ ಮೊದಲ ಹಂತದ ವಿನೂತನ ಕಾರ್ಯಕ್ರಮ ಇದಾಗಿದ್ದು, ಜು.17ರಂದು ಶಿರ್ವ ಗಣೇಶೋತ್ಸವ ವೇದಿಕೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಿ.ಶಂಭು ಶೆಟ್ಟಿ ಶಿರ್ವ, 24ರಂದು ಬಂಟಕಲ್ಲು ಶರ್ಮಾರ ನಿವಾಸದಲ್ಲಿ ಬಿ.ಲಕ್ಷ್ಮೀನಾರಾಯಣ ಶರ್ಮಾ ಸಂಸ್ಮರಣೆಯಲ್ಲಿ, 30ರಂದು ಮೂಡುಬೆಳ್ಳೆ ಶಿವಾಜಿ ಎಸ್.ಸುವರ್ಣರ ನಿವಾಸದಲ್ಲಿ ಪಂಡಿತ್ ಎಸ್.ಕೆ. ಸುವರ್ಣ ಸಂಸ್ಮರಣೆಯಲ್ಲಿ, ಆ.9ರಂದು ಕಟಪಾಡಿ ನಾಯಕ್ ಕುಟುಂಬದ ಮನೆಯಲ್ಲಿ ಹಿರಿಯ ಹೋರಾಟಗಾರರ ಸಂಸ್ಮರಣೆಯಲ್ಲಿ, ಆ.14ರಂದು ಶಿರ್ವ ಮಟ್ಟಾರು ಅರಂತಡೆ ಮನೆಯಲ್ಲಿ ಮಟ್ಟಾರು ವಿಠಲ ಹೆಗ್ಡೆ ಸಂಸ್ಮರಣೆಯಲ್ಲಿ, ಆ.21ರಂದು ಕಾಪು ಮಲ್ಲಾರು ದಿ.ಬಾಬು ಮಾಸ್ತರ್ ನಿವಾಸದಲ್ಲಿ ಅವರ ಸಂಸ್ಮರಣೆಯಲ್ಲಿ ನುಡಿನಮನ ಸಲ್ಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.