ಉದ್ಯಾವರದಲ್ಲಿ ಬಕ್ರೀದ್ ಸೌಹಾರ್ದ ಕೂಟ

ಉಡುಪಿ, ಜು.14: ನಮ್ಮ ಧರ್ಮವನ್ನು ಗೌರವಿಸುವುದರ ಜೊತೆ, ಇತರ ಧರ್ಮವನ್ನು ಗೌರವಿಸುವುದೇ ನಿಜವಾದ ಧರ್ಮ. ಇಂತಹ ಅದ್ಬುತ ಸಂಸ್ಕೃತಿಯನ್ನು ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟಿದ್ದಾರೆ ಎಂದು ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ಹೇಳಿದ್ದಾರೆ.
ಉದ್ಯಾವರ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ವ್ಯಾಪ್ತಿಯ ಸೌಹಾರ್ದ ಸಮಿತಿ ನೇತೃತ್ವದಲ್ಲಿ ಸರ್ವಧರ್ಮೀಯರ ಸಹಕಾರದೊಂದಿಗೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಕಾರ್ಯಾಲಯದಲ್ಲಿ ನಡೆದ ಬಕ್ರೀದ್ ಸೌಹಾರ್ದ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ಕೊರೊನ ಸಂದರ್ಭದಲ್ಲಿ ಸರ್ವಧರ್ಮೀಯ ಯುವಕರು ಜಾತಿ ಮತ ಭೇದವಿಲ್ಲದೆ ನೀಡಿದ ಸೇವೆಯನ್ನು ನಾವು ಗಮನಿಸಿದ್ದೇವೆ. ಇಂತಹ ಸೇವೆಯನ್ನು ಮರೆಯಲು ಅಸಾಧ್ಯ. ತುಳುನಾಡಿನಲ್ಲಿ ಸೌಹಾರ್ದತೆಗೆ ವಿಶೇಷ ಗೌರವವಿದೆ. ನಾರಾಯಣ ಗುರು ಮತ್ತು ಬಪ್ಪ ಬ್ಯಾರಿಯ ಪ್ರಸಿದ್ಧತೆಯನ್ನು ನಾವೆಲ್ಲ ಚರಿತ್ರೆಯಲ್ಲಿ ಕಂಡಿದ್ದೇವೆ. ಸೌಹಾರ್ದತೆಯ ನಿಜವಾದ ಅರ್ಥವನ್ನು ತುಳುನಾಡಿಗೆ ಅವರು ನೀಡಿದ್ದಾರೆ ಎಂದರು.
ಸಾಹಿತಿ ಡಾ.ಕೆ.ಪಿ.ಮಹಾಲಿಂಗು ಕಲ್ಕುಂಡ, ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ಪ್ರಧಾನ ಧರ್ಮಗುರು ಅ.ವಂ. ಫಾ.ಸ್ಟ್ಯಾನಿ ಬಿ.ಲೋಬೊ, ಉದ್ಯಾವರ ಹಲೀಮಾ ಸಾಬ್ಜು ಅಡಿಟೋರಿಯಂನ ನಿರ್ದೇಶಕ ಜನಾಬ್ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಮತ್ತು ಉದ್ಯಾವರ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ರಿಯಾಝ್ ಪಳ್ಳಿ ಶುಭಹಾರೈಸಿದರು.
ಸೌಹಾರ್ದ ಸಮಿತಿ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಆಬಿದ್ ಅಲಿ ಸ್ವಾಗತಿಸಿದರು. ರೊಯ್ಸ್ ಫೆರ್ನಾಂಡಿಸ್ ವಂದಿಸಿದರು. ಕೋಶಾಧಿಕಾರಿ ಪ್ರತಾಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.