ಉಡುಪಿಗೆ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆ ಮಂಜೂರು
ಸಾಂದರ್ಭಿಕ ಚಿತ್ರ (PTI)
ಉಡುಪಿ, ಜು.14: ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ದೇಶದಾದ್ಯಂತ 23 ಇಎಸ್ಐ ಆಸ್ಪತ್ರೆಗಳನ್ನು ಮಂಜೂರು ಮಾಡಿದ್ದು, ಇವುಗಳಲ್ಲಿ ಉಡುಪಿಗೂ 100 ಹಾಸಿಗೆ ಸಾಮರ್ಥ್ಯದ ಇಎಸ್ಐ ಆಸ್ಪತ್ರೆಯೊಂದು ಮಂಜೂರುಗೊಂಡಿದೆ. ಇದರೊಂದಿಗೆ ದೇಶಾದ್ಯಂತ 62 ನೂತನ ಡಿಸ್ಪೆಸ್ಸರಿಗಳನ್ನು ಸಹ ಪ್ರಾರಂಭಿಸಲಾಗುತ್ತದೆ.
ಇಎಸ್ಐಸಿಯ 188ನೇ ಸಭೆಯಲ್ಲಿ ಒಟ್ಟು 23 ನೂತನ ಇಎಸ್ಐ ಆಸ್ಪತ್ರೆಗಳಿಗೆ ಅನುಮತಿ ನೀಡಲಾಗಿದ್ದು, ಇವುಗಳಲ್ಲಿ ಎರಡು ಆಸ್ಪತ್ರೆಗಳು ಕರ್ನಾಟಕಕ್ಕೆ ಸಂದಿವೆ. ಉಡುಪಿಯಲ್ಲದೇ, ತುಮಕೂರು ಜಿಲ್ಲೆಗೂ 100 ಹಾಸಿಗೆ ಸಾಮರ್ಥ್ಯದ ಇಎಸ್ಐ ಆಸ್ಪತ್ರೆಯನ್ನು ಮಂಜೂರು ಮಾಡಲಾಗಿದೆ.
ಮಹಾರಾಷ್ಟ್ರಕ್ಕೆ ಒಟ್ಟು ಆರು ಇಎಸ್ಐ ಆಸ್ಪತ್ರೆಗಳು ಮಂಜೂರಾಗಿದ್ದರೆ, ಹರ್ಯಾಣ ರಾಜ್ಯಕ್ಕೆ ನಾಲ್ಕನ್ನು ನೀಡಲಾಗಿದೆ. ಉತ್ತರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೂ ತಲಾ ಎರಡನ್ನು ಮಂಜೂರು ಮಾಡಲಾಗಿದೆ. ಪಶ್ಚಿಮ ಬಂಗಾಳ, ಒಡಿಶಾ, ಗುಜರಾತ್, ಗೋವಾ, ಛತ್ತೀಸ್ಗಢ, ಆಂಧ್ರ ಪ್ರದೇಶ, ಮಧ್ಯಪ್ರದೇಶಗಳಿಗೆ ತಲಾ ಒಂದು ಇಎಸ್ಐ ಆಸ್ಪತ್ರೆ ಮಂಜೂರಾಗಿದೆ.
ಉಡುಪಿಗೆ ಮಂಜೂರಾಗಿರುವ ಇಎಸ್ಐ ಆಸ್ಪತ್ರೆಯನ್ನು ಇಎಸ್ಐ ಕಾರ್ಪೋರೇಷನ್ ನಡೆಸಿದರೆ, ತುಮಕೂರಿನ ಇಎಸ್ಐ ಆಸ್ಪತ್ರೆಯನ್ನು ರಾಜ್ಯ ಸರಕಾರ ನಿರ್ವಹಿಸಲು ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಹರ್ಯಾಣದ ನಾಲ್ಕು, ಛತ್ತೀಸ್ಗಢ ಮತ್ತು ಒರಿಸ್ಸಾ ಆಸ್ಪತ್ರೆಗಳನ್ನು ಆಯಾ ರಾಜ್ಯ ಸರಕಾರ ನಿರ್ವಹಿಸಲಿವೆ.
ಇಎಸ್ಐ ಆಸ್ಪತ್ರೆ ಉಡುಪಿ ಭಾಗದ ಜನತೆಯ ಹಲವಾರು ವರ್ಷಗಳ ಬೇಡಿಕೆಯಾಗಿದ್ದು, ಇದೀಗ ಉಡುಪಿಗೆ 100 ಬೆಡ್ ಸಾಮರ್ಥ್ಯದ ಇಎಸ್ಐ ಆಸ್ಪತ್ರೆ ಮಂಜೂರು ಮಾಡಿದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭುಪೇಂದ್ರ ಯಾದವ್ ಅವರಿಗೆ, ಈ ಬಗ್ಗೆ ಶ್ರಮಿಸಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೃತಜ್ಞತೆ ಸಲ್ಲಿಸಿದ್ದಾರೆ.