ಕೋಟ್ಯಂತರ ಬಡ ಕುಟುಂಬಗಳ ಮಾಸಿಕ ಬಜೆಟ್ ಕಬಳಿಸುತ್ತಿರುವ ಭಾರತದ ಆಹಾರ ಹಣದುಬ್ಬರ

ಸಾಂದರ್ಭಿಕ ಚಿತ್ರ
ಮುಂಬೈ,ಜು.14: ಮೇ ತಿಂಗಳಿನಲ್ಲಿ ಶೇ.7.04ರಷ್ಟಿದ್ದ ಚಿಲ್ಲರೆ ಹಣದುಬ್ಬರವು ಜೂನ್ನಲ್ಲಿ ಶೇ.7.01ಕ್ಕೆ ಇಳಿದಿದೆಯಾದರೂ,ಈ ಬಗ್ಗೆ ಈಗಲೇ ನೆಮ್ಮದಿಯನ್ನು ಪಟ್ಟುಕೊಳ್ಳುವುದು ಅವಸರವಾಗಬಹುದು. ವಿಶ್ವಾದ್ಯಂತ ಪೂರೈಕೆ ಸರಪಳಿಗಳು ಈಗಲೂ ಚೇತರಿಸಿಕೊಂಡಿಲ್ಲ. ರಶ್ಯ-ಉಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉಂಟಾಗಿರುವ ಭೂರಾಜಕೀಯ ಉದ್ವಿಗ್ನತೆಗಳು ಈಗಲೂ ಜಾಗತಿಕ ಸ್ಥೂಲ ಆರ್ಥಿಕತೆಯ ಮೇಲೆ ಕರಿನೆರಳನ್ನು ಬೀರುತ್ತಿವೆ ಮತ್ತು ಮುಂಗಾರು ಮಳೆಯ ಕೆಟ್ಟ ಪ್ರದರ್ಶನವು ಇನ್ನೂ ಮುಂದುವರಿದರೆ ಹಣದುಬ್ಬರವು ಇಳಿಯುತ್ತಿದೆ ಎಂಬ ಭರವಸೆಯನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಬಹುದು.
ಅದೇನೇ ಇದ್ದರೂ,ಧಾನ್ಯಗಳು,ತರಕಾರಿಗಳು,ಹಾಲು ಮತ್ತು ಮಾಂಸದ ಬೆಲೆಗಳಲ್ಲಿ ಹೆಚ್ಚಳದಿಂದಾಗಿ ಆಹಾರ ಮತ್ತು ಪಾನೀಯ ಹಣದುಬ್ಬರವು ಜೂನ್ನಲ್ಲಿ ಶೇ.7.56ಕ್ಕೆ ಏರಿಕೆಯಾಗಿರುವುದರಿಂದ ಜನಸಾಮಾನ್ಯರಿಗೆ ಚಿಲ್ಲರೆ ಹಣದುಬ್ಬರದ ಬಿಸಿ ಮುಂದುವರಿದೆ. ಆಹಾರ ಹಣದುಬ್ಬರವು ಕೋಟ್ಯಂತರ ಭಾರತೀಯ ಬಡಕುಟುಂಬಗಳ ಮಾಸಿಕ ಬಜೆಟ್ ಅನ್ನು ಆಪೋಶನ ತೆಗೆದುಕೊಳ್ಳುತ್ತಿದೆ.
ಸಾಗಾಣಿಕೆ ವೆಚ್ಚಗಳು ಮತ್ತು ಬೇಸಿಗೆಯಲ್ಲಿ ಉಷ್ಣ ಮಾರುತದಿಂದಾಗಿ ಉಂಟಾಗಿದ್ದ ಹಾನಿಯಿಂದಾಗಿ ತರಕಾರಿಗಳ ಬೆಲೆಗಳು ಮುಗಿಲೆತ್ತರಕ್ಕೆ ಏರಿವೆ. ಕಳೆದ 12 ತಿಂಗಳುಗಳಲ್ಲಿ ಟೊಮೆಟೊ ಬೆಲೆ ನಂಬಲಾಗದಷ್ಟು ಏರಿದೆ. ರೇಟಿಂಗ್ ಏಜೆನ್ಸಿ ಕೇರ್ ಎಡ್ನ ಸಂಶೋಧನಾ ಟಿಪ್ಪಣಿಯಂತೆ ಹಿಂದಿನ ವರ್ಷಕ್ಕೆ ಹೋಲಿಸಿದರೆ 2022 ಜೂನ್ನಲ್ಲಿ ಟೊಮೆಟೊದ ಚಿಲ್ಲರೆ ಬೆಲೆಯಲ್ಲಿ ಸುಮಾರು ಶೇ.145ರಷ್ಟು ಏರಿಕೆಯಾಗಿದೆ. ರೆಸ್ಟೋರಂಟ್ಗಳಿಂದ ಹೆಚ್ಚಿನ ಬೇಡಿಕೆ ಮತ್ತು ಮೇವು ದುಬಾರಿಯಾಗಿರುವುದು ಮಾಂಸ ಮತ್ತು ಹಾಲಿನ ಬೆಲೆಗಳು ಏರುವಂತೆ ಮಾಡಿವೆ.
ಆಹಾರ ಹಣದುಬ್ಬರದಲ್ಲಿ ಏರಿಕೆಯ ಹೊಡೆತ ಜನಸಾಮಾನ್ಯರಿಗೆ ಮಾತ್ರ ಮೀಸಲಾಗಿಲ್ಲ. ಕ್ರಿಸಿಲ್ ರಿಸರ್ಚ್ ಪ್ರಕಾರ,ಕೃಷಿ ಸರಕುಗಳ ಬೆಲೆಗಳಲ್ಲಿ ಏರಿಕೆಯು ಆಹಾರ ಉತ್ಪಾದನಾ ಕಂಪನಿಗಳ ಮೇಲೂ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುತ್ತದೆ. ಅಗತ್ಯ ಕೃಷಿ ಸರಕುಗಳ ಬೆಲೆಗಳು ಅಧಿಕ ಏರಿಳಿತ ಕಾಣಲಿದ್ದು,ಇದು ಹಾಲಿ ವಿತ್ತವರ್ಷದಲ್ಲಿ ದೇಶಿಯ ಆಹಾರ ಉತ್ಪಾದನೆ ಕಂಪನಿಗಳ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಕ್ರಿಸಿಲ್ ರಿಸರ್ಚ್ ತನ್ನ ಜು.12ರ ಸಂಶೋಧನಾ ಟಿಪ್ಪಣಿಯಲ್ಲಿ ಸುಳಿವು ನೀಡಿದೆ.
ಗೋದಿ ಮತ್ತು ಮೈದಾ ಬೆಲೆಗಳು ಶೇ.7ರಿಂದ ಶೇ.8,ಬೇಳೆಗಳು ಮತ್ತು ಬೇಳೆಹಿಟ್ಟುಗಳ ಬೆಲೆಗಳು ಶೇ.6ರಿಂದ ಶೇ.7,ಹಾಲು ಮತ್ತು ಸಕ್ಕರೆ ಬೆಲೆಗಳು ಶೇ.1ರಷ್ಟು ಏರಿಕೆಯಾಗಲಿವೆ ಎಂದು ಕ್ರಿಸಿಲ್ ರಿಸರ್ಚ್ ನಿರೀಕ್ಷಿಸಿದೆ. ಇನ್ನೊಂದೆಡೆ ಭಾರತೀಯ ಕುಟುಂಬಗಳ ಮಾಸಿಕ ಬಜೆಟ್ನ್ನು ತಿಂದುಹಾಕುತ್ತಿರುವ ತಾಳೆ ಮತ್ತು ಸೋಯಾ ಎಣ್ಣೆಗಳ ಬೆಲೆಗಳು ಗರಿಷ್ಠ ಮಟ್ಟದಿಂದ ಶೇ.16-ಶೇ.17ರಷ್ಟು ಹಾಗೂ ಸೂರ್ಯಕಾಂತಿ ಎಣ್ಣೆಯ ಬೆಲೆಗಳು ಶೇ.10-ಶೇ.12ರಷ್ಟು ಇಳಿಕೆಯಾಗಲಿವೆ ಎಂದು ಅದು ನಿರೀಕ್ಷಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ ಆಹಾರ ಮತ್ತು ಸರಕುಗಳ ಬೆಲೆಗಳು ತೀವ್ರ ಏರಿಳಿತಗಳನ್ನು ಅನುಭವಿಸಿವೆ. ಸಾಂಕ್ರಾಮಿಕದ ದಾಳಿ ಮತ್ತು ಬೇಡಿಕೆಯಲ್ಲಿ ದಿಢೀರ್ ಕುಸಿತದಿಂದಾಗಿ 2021ರ ವಿತ್ತವರ್ಷದಲ್ಲಿ ಗೋದಿ ಮತ್ತು ಸಕ್ಕರೆ ಬೆಲೆಗಳು ಅನುಕ್ರಮವಾಗಿ ಶೇ.14 ಮತ್ತು ಶೇ.2ರಷ್ಟು ಇಳಿದಿದ್ದವಾದರೂ 2022ನೇ ವಿತ್ತವರ್ಷದಲ್ಲಿ ಸಾಂಕ್ರಾಮಿಕದ ಪ್ರಭಾವವು ಕ್ಷೀಣಿಸುವುದರೊಂದಿಗೆ ಮತ್ತು ಆಹಾರ ಸಂಸ್ಕರಣೆ ಕಂಪನಿಗಳಿಂದ ಬೇಡಿಕೆಯು ಹೆಚ್ಚುವುದರೊಂದಿಗೆ ಶೇ.11 ಮತ್ತು ಶೇ.7ರಷ್ಟು ಏರಿಕೆಯನ್ನು ಕಂಡಿದ್ದವು. ರಶ್ಯ-ಉಕ್ರೇನ್ ಬಿಕ್ಕಟ್ಟು ಆರಂಭಗೊಂಡ 2022 ಫೆಬ್ರವರಿಯಿಂದ ಇವು ಶೇ.19 ಮತ್ತು ಶೇ.6ರಷ್ಟು ಏರಿಕೆಯನ್ನು ದಾಖಲಿಸಿವೆ.
ಖಾದ್ಯತೈಲ ಬೆಲೆಗಳು 2021ರ ವಿತ್ತವರ್ಷದಲ್ಲಿ ಶೇ.35ರಷ್ಟು ಏರಿಕೆಯಾಗಿದ್ದು,ವಿತ್ತವರ್ಷ 2022ರಲ್ಲಿ ಸಾಂಕ್ರಾಮಿಕ ಮತ್ತು ದ.ಅಮೆರಿಕ,ಬ್ರಝಿಲ್ ಮತ್ತು ಮಲೇಶಿಯಾದಂತಹ ಖಾದ್ಯತೈಲ ಉತ್ಪಾದಕ ರಾಷ್ಟ್ರಗಳಿಂದ ಪೂರೈಕೆ ಕುಸಿತದಿಂದಾಗಿ ಇನ್ನೂ ಶೇ.40ರಷ್ಟು ಏರಿಕೆಯಾಗಿದ್ದವು. ಉಕ್ರೇನ್-ರಶ್ಯ ಯುದ್ಧ ಆರಂಭವಾದ ಬಳಿಕ ಮತ್ತೂ ಶೇ.40ರಷ್ಟು ಏರಿಕೆಯನ್ನು ದಾಖಲಿಸಿವೆ ಎಂದು ಕ್ರಿಸಿಲ್ ರಿಸರ್ಚ್ ಹೇಳಿದೆ.
ಸದ್ಯಕ್ಕೆ ಭಾರತ ಸರಕಾರವು ಕಚ್ಚಾತೈಲಗಳ ನಿರಂತರ ಬೆಲೆಇಳಿಕೆಯ ಮೇಲೆ ಭರವಸೆಯಿಟ್ಟುಕೊಂಡಿದೆ. ಆದರೆ ಈಗಿನ ಪೂರೈಕೆ ವ್ಯವಸ್ಥೆಯಲ್ಲಿ ವ್ಯತ್ಯಯಗಳು ಉಂಟಾದರೆ ಕಚ್ಚಾ ತೈಲಗಳ ಬೆಲೆಗಳು ಮತ್ತೆ ಹೆಚ್ಚಲಿವೆ ಮತ್ತು ಇದು ಭಾರತೀಯ ಆರ್ಥಿಕತೆಯು ಪಡೆದುಕೊಳ್ಳಬಹುದಾದ ಅಲ್ಪಸ್ವಲ್ಪ ನೆಮ್ಮದಿಯನ್ನೂ ಕಿತ್ತುಕೊಳ್ಳುತ್ತದೆ.
ಈ ನಡುವೆ ಹಣದುಬ್ಬರದ ಅಂಕಿಅಂಶಗಳು ಭಾರತೀಯ ಆರ್ಥಿಕತೆಗೆ ಹಾನಿಯನ್ನು ಮುಂದುವರಿಸಿವೆ ಮತ್ತು ಆರ್ಬಿಐ ಬಡ್ಡಿದರ ಏರಿಕೆಯ ತನ್ನ ಪಥದಿಂದ ವಿಮುಖಗೊಳ್ಳುವ ಸಾಧ್ಯತೆಗಳಿಲ್ಲ. ಹಾಲಿ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರವು ಶೇ.6-ಶೇ.6.7ಕ್ಕೆ ತಗ್ಗುವ ನಿರೀಕ್ಷೆಯಿದೆ, ಆದಾಗ್ಯೂ ಅದು ಆರ್ಬಿಐನ ಹಣದುಬ್ಬರ ಮಿತಿಯ ಹೊರಗೇ ಇರಲಿದೆ. ಒಂದಲ್ಲ ಒಂದು ರೀತಿಯಿಂದ ಆರ್ಬಿಐನಿಂದ ಬಡ್ಡಿದರ ಏರಿಕೆಯಂತೂ ಖಚಿತವಾಗಿದೆ.