ಬ್ರಿಟನ್ ಪ್ರಧಾನಿ ಹುದ್ದೆಗೆ ರೇಸ್ : 3ನೇ ಸುತ್ತಿನಲ್ಲೂ ರಿಶಿ ಸುನಾಕ್ ಮುನ್ನಡೆ

ರಿಷಿ ಸುನಾಕ್ (Photo: PTI)
ಲಂಡನ್, ಜು.19: ಬ್ರಿಟನ್ನ ಪ್ರಧಾನಿ ಹುದ್ದೆಗೆ ನಡೆಯುತ್ತಿರುವ ಸ್ಪರ್ಧೆಯ 3ನೇ ಸುತ್ತಿನಲ್ಲೂ ಮಾಜಿ ಸಚಿವ ರಿಷಿ ಸುನಾಕ್ ಅಗ್ರಸ್ಥಾನ ಕಾಯ್ದುಕೊಳ್ಳುವುದರೊಂದಿಗೆ ಪ್ರಧಾನಿ ಗದ್ದುಗೆಗೆ ಇನ್ನಷ್ಟು ನಿಕಟವಾಗಿದ್ದಾರೆ. ಈ ಮಧ್ಯೆ, ಸೋಮವಾರ ನಡೆದ 3ನೇ ಸುತ್ತಿನ ಸ್ಪರ್ಧೆಯಲ್ಲಿ ಮತ್ತೊಬ್ಬ ನಿಕಟ ಸ್ಪರ್ಧಿ ಆಖಾಡದಿಂದ ಹೊರಬಿದ್ದಿದ್ದಾರೆ.
ಸೋಮವಾರ ನಡೆದ ಸ್ಪರ್ಧೆಯಲ್ಲಿ ಸುನಾಕ್ 115 ಮತ, ಮಾಜಿ ಸಚಿವರಾದ ಪೆನ್ನೀ ಮಾರ್ಡಂಟ್ 82 ಮತ್ತು ಲಿರ್ ಟ್ರೂಸ್ 71, ಕೆಮಿ ಬದೆನೋಚ್ 58 ಮತ ಗಳಿಸಿ ಸ್ಪರ್ಧೆಯಲ್ಲಿ ಉಳಿದುಕೊಂಡರೆ, ಕನಿಷ್ಟ ಮತ ಗಳಿಸಿದ ಟಾಮ್ ಟುಗೆಂಡ್ಹಟ್ ಸ್ಪರ್ಧೆಯಿಂದ ಹೊರಬಿದ್ದರು. ಬೋರಿಸ್ ಜಾನ್ಸನ್ ರಾಜೀನಾಮೆ ಘೋಷಿಸಿದ ಬಳಿಕ, ರಿಷಿ ಸುನಾಕ್ ಮುಂದಿನ ಪ್ರಧಾನಿ ಎಂಬ ಮಾತು ಬ್ರಿಟನ್ ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಆದರೆ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಇತರ ಕೆಲವು ಪ್ರಮುಖರೂ ತಮ್ಮ ಹಕ್ಕು ಮಂಡಿಸಿದ್ದರಿಂದ ಪಕ್ಷದ 358 ಸಂಸತ್ ಸದಸ್ಯರು ಪ್ರಧಾನಿ ಹುದ್ದೆಯ ಅಭ್ಯರ್ಥಿಯನ್ನು ಮತದಾನದ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಮಂಗಳವಾರ 4ನೇ ಹಂತದ ಮತದಾನ ನಡೆಯಲಿದೆ. ಇಲ್ಲಿಯೂ ಕನಿಷ್ಟ ಮತ ಗಳಿಸಿದ ಅಭ್ಯರ್ಥಿ ರೇಸ್ನಿಂದ ಹೊರಬೀಳುತ್ತಾರೆ. ಅಂತಿಮ ಹಂತದಲ್ಲಿ ಉಳಿಯುವ ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬರನ್ನು ಪಕ್ಷದ 2 ಲಕ್ಷ ಸದಸ್ಯರು ಅಂಚೆ ಮತದಾನದ ಮೂಲಕ ಪ್ರಧಾನಿ ಹುದ್ದೆಗೆ ಆಯ್ಕೆ ಮಾಡುತ್ತಾರೆ. ಸೆಪ್ಟಂಬರ್ 5ರಂದು ನೂತನ ಪ್ರಧಾನಿಯ ಹೆಸರನ್ನು ಘೋಷಿಸಲಾಗುವುದು.