ಲೆಬನಾನ್ ಸೆಂಟ್ರಲ್ ಬ್ಯಾಂಕ್ ಸಿಬಂದಿಗಳ ಮುಷ್ಕರ
ಬೈರೂತ್, ಜು.20: ಸೆಂಟ್ರಲ್ ಬ್ಯಾಂಕ್‌ನ ಗವರ್ನರ್‌ರ ಬಂಧನಕ್ಕೆ ಅಲ್ಲಿನ ನ್ಯಾಯಾಧೀಶರು ಪ್ರಯತ್ನಿಸಿರುವುದನ್ನು ವಿರೋಧಿಸಿ ಬ್ಯಾಂಕ್‌ನ ಸಿಬಂದಿಗಳು ಮುಷ್ಕರ ನಡೆಸಿರುವುದಾಗಿ ವರದಿಯಾಗಿದೆ. ಅಕ್ರಮ ಹಣ ವರ್ಗಾವಣೆ ಮತ್ತು ಅಕ್ರಮ ಸಂಪತ್ತು ಸಂಗ್ರಹಿಸಿರುವ ಆರೋಪಕ್ಕೆ ಒಳಗಾಗಿರುವ ಲೆಬನಾನ್ ಸೆಂಟ್ರಲ್ ಬ್ಯಾಂಕ್ ಗವರ್ನರ್ ರಿಯಾದ್ ಸಲಮೆಹ್‌ರ ಬಂಧನ ಕಾರ್ಯಾಚರಣೆಗೆ ನ್ಯಾಯಾಧೀಶ ಘಾಡ ಅವೋನ್‌ಗೆ ಅಧಿಕಾರ ನೀಡಲಾಗಿತ್ತು.
ಅದರಂತೆ ಬ್ಯಾಂಕ್ ಗವರ್ನರ್ ಕ್ವಾರ್ಟರ್ಸ್‌ಗೆ ನ್ಯಾಯಾಧೀಶರು ಹಲವು ಬಾರಿ ತೆರಳಿದರೂ ಸಫಲವಾಗಿರಲಿಲ್ಲ. ಈ ಕಾರ್ಯಾಚರಣೆಯನ್ನು ವಿರೋಧಿಸಿ ಬ್ಯಾಂಕ್ ಸಿಬಂದಿಗಳು ಮುಷ್ಕರ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಅಕ್ರಮ ಹಣ ವರ್ಗಾವಣೆ ಹಾಗೂ ಅಕ್ರಮ ಆಸ್ತಿ ಸಂಗ್ರಹಿಸಿರುವ ಆರೋಪಕ್ಕೆ ಸಂಬಂಧಿಸಿ ಸಲಮೆಹ್ ವಿರುದ್ಧ ಯುರೋಪಿಯನ್ ಯೂನಿಯನ್‌ನ 5 ದೇಶಗಳು ಹಾಗೂ ಲೆಬನಾನ್‌ನಲ್ಲಿ ತನಿಖೆ ನಡೆಯುತ್ತಿದೆ.
ಲೆಬನಾನ್‌ನ ಸೆಂಟ್ರಲ್ ಬ್ಯಾಂಕ್‌ನಿಂದ ಯುರೋಪ್‌ನಲ್ಲಿ ಸಲಮೆಹ್ ಸಹೋದರನ ಮಾಲಕತ್ವದ ಸಂಸ್ಥೆಗೆ ಕೋಟ್ಯಾಂತರ ಡಾಲರ್ ಮೊತ್ತ ವರ್ಗಾವಣೆಯಾಗಿರುವ ಪ್ರಕರಣದ ಹಿನ್ನೆಲೆಯಲ್ಲಿ ಯುರೋಪ್‌ನಲ್ಲಿ ಸಲಮೆಹ್‌ಗೆ ಸೇರಿದ 100 ಮಿಲಿಯನ್ ಯುರೋ ಮೌಲ್ಯದ ಆಸ್ತಿಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಬ್ಯಾಂಕ್‌ನ ನಷ್ಟವನ್ನು ಮರೆಮಾಚಲು ನಕಲಿ ಬಜೆಟ್ ಸೃಷ್ಟಿಸಿದ ಆರೋಪವೂ ಸಲಮೆಹ್ ಮೇಲಿದೆ.