ದ್ರೌಪದಿ ಮುರ್ಮು ದೇಶದ ಆಶಾಕಿರಣ: ಪ್ರಧಾನಿ ಮೋದಿ ಬಣ್ಣನೆ

ಹೊಸದಿಲ್ಲಿ: ದ್ರೌಪದಿ ಮುರ್ಮು ಚುನಾವಣೆಯಲ್ಲಿ ಗೆದ್ದು, ದೇಶದ ಹದಿನೈದನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗುತ್ತಿದ್ದಂತೇ, ಪ್ರಧಾನಿ ನರೇಂದ್ರ ಮೋದಿ "ಭಾರತ ಇತಿಹಾಸ ಬರೆದಿದೆ" ಎಂದು ಟ್ವೀಟ್ ಮಾಡಿದ್ದಾರೆ. ದೇಶದ ಅತ್ಯುನ್ನತ ಹುದ್ದೆಗೇರಿದ ಮೊದಲ ಬುಡಕಟ್ಟು ಮಹಿಳೆ ಎಂಬ ಕೀರ್ತಿಗೆ ಅವರು ಭಾಜನರಾಗಿದ್ದಾರೆ ಎಂದು ಮೋದಿ ಬಣ್ಣಿಸಿದ್ದಾರೆ.
ಮೂರನೇ ಸುತ್ತಿನ ಎಣಿಕೆ ಕಾರ್ಯ ಬಳಿಕ ಮುರ್ಮು ಅಬೇಧ್ಯ ಮುನ್ನಡೆ ಸಾಧಿಸಿದ ಸಂದರ್ಭದಲ್ಲಿ ಮೋದಿಯವರು ಸಂಪುಟ ಸಹೋದ್ಯೋಗಿಗಳ ಜತೆಗೆ ಇಂಡಿಯಾ ಗೇಟ್ನಲ್ಲಿರುವ ಮುರ್ಮು ಅವರ ತಾತ್ಕಾಲಿಕ ನಿವಾಸಕ್ಕೆ ತೆರಳಿ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪ್ರಧಾನಿ ಮೋದಿಯವರು ಕೆಲ ಸಮಯವನ್ನು ಮುರ್ಮು ನಿವಾಸದಲ್ಲಿ ಕಳೆದರು.
"130 ಕೋಟಿ ಭಾರತೀಯರು ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದರೆ, ಪೂರ್ವ ಭಾರತದ ಗುಡ್ಡಗಾಡು ಪ್ರದೇಶದಿಂದ ಬಂದ ಬುಡಕಟ್ಟು ಸಮುದಾಯದ ಭಾರತದ ಪುತ್ರಿ ನಮ್ಮ ರಾಷ್ಟ್ರಪತಿಯಾಗಿ ಚುನಾಯಿತರಾಗುತ್ತಿದ್ದಾರೆ. ಈ ಸಾಧನೆ ಮಾಡಿದ ದ್ರೌಪದಿ ಮುರ್ಮು ಅವರಿಗೆ ಅಭಿನಂದನೆಗಳು" ಎಂದು ಹೇಳಿದರು.
ವೈಯಕ್ತಿಕ ಬದುಕಿನಲ್ಲಿ ಎಲ್ಲ ಪ್ರತಿಕೂಲಗಳ ನಡುವೆಯೂ ಸಮಾಜಕ್ಕೆ ಸೇವೆ ಸಲ್ಲಿಸಿದ ಬಗೆಯನ್ನು ಮೋದಿ ನೆನಪಿಸಿಕೊಂಡರು. "ದ್ರೌಪದಿ ಮುರ್ಮು ಅವರ ಜೀವನ, ಅವರ ಆರಂಭಿಕ ಹೋರಾಟಗಳು, ಅವರ ಸಮೃದ್ಧ ಸೇವೆ ಮತ್ತು ಅದ್ಭುತ ಯಶಸ್ಸು ಎಲ್ಲ ಭಾರತೀಯರಿಗೆ ಸ್ಫೂರ್ತಿ. ಅವರು ನಮ್ಮ ಪ್ರಜೆಗಳ, ಅದರಲ್ಲೂ ಮುಖ್ಯವಾಗಿ ಬಡವರ, ತುಳಿತಕ್ಕೊಳಗಾದವರ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ" ಎಂದು ಬಣ್ಣಿಸಿದರು.
ಮುರ್ಮು ಈ ಮುನ್ನ ಶಾಸಕಿ ಮತ್ತು ಸಚಿವೆಯಾಗಿದ್ದರು. ಜಾರ್ಖಂಡ್ ರಾಜ್ಯಪಾಲರಾಗಿ ಅದ್ಭುತವಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಮುಂಚೂಣಿಯಲ್ಲಿ ನಿಂತು ದೇಶವನ್ನು ಮುನ್ನಡೆಸುವ ಮತ್ತು ಭಾರತದ ಅಭಿವೃದ್ಧಿಯ ಪಯಣವನ್ನು ಬಲಗೊಳಿಸುವ ಅದ್ಭುತ ರಾಷ್ಟ್ರಪತಿಯಾಗುವುದು ನಿಶ್ಚಿತ" ಎಂದು ಹೇಳಿರುವುದಾಗಿ timesofindia.com ವರದಿ ಮಾಡಿದೆ.