ಭಾರತದಿಂದ ಬೀಫ್ ಆಮದಿಗೆ ಬಾಂಗ್ಲಾದೇಶಕ್ಕೆ ಸರಕಾರ ಮನವಿ: ಒವೈಸಿ ವ್ಯಂಗ್ಯ

ಹೊಸದಿಲ್ಲಿ: ಭಾರತದಿಂದ ಬೀಫ್ ಆಮದು ಮಾಡಿಕೊಳ್ಳುವುದನ್ನು ಪುನರಾರಂಭ ಮಾಡುವಂತೆ ಭಾರತ ಸರ್ಕಾರ ಬಾಂಗ್ಲಾದೇಶಕ್ಕೆ ಮನವಿ ಮಾಡಿಕೊಂಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, "ಧಾರ್ಮಿಕ ಭಾವನೆಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಿಸುತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಂಸದಿಂದ ಹಣ ಮಾಡಲೂ ಯಾವುದೇ ಸಮಸ್ಯೆಯಿಲ್ಲ" ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ವ್ಯಂಗ್ಯವಾಡಿದ್ದಾರೆ.
ಸ್ಥಳೀಯ ಪಶುಪಾಲಕರನ್ನು ರಕ್ಷಿಸುವ ಸಲುವಾಗಿ ಭಾರತದಿಂದ ಶೀತಲೀಕೃತ ಮಾಂಸ, ಅದರಲ್ಲೂ ವಿಶೇಷವಾಗಿ ಎಮ್ಮೆ ಮಾಂಸ ಆಮದು ಮಾಡಿಕೊಳ್ಳುವುದನ್ನು ಬಾಂಗ್ಲಾದೇಶ ಸರ್ಕಾರ ಸ್ಥಗಿತಗೊಳಿಸಿದೆ. ವರದಿಗಳ ಪ್ರಕಾರ, ಢಾಕಾದಲ್ಲಿರುವ ಭಾರತೀಯ ಹೈಕಮಿಷನ್, ಬಾಂಗ್ಲಾದೇಶದ ಮೀನುಗಾರಿಕೆ ಮತ್ತು ಪಶುಪಾಲನಾ ಸಚಿವಾಲಯಕ್ಕೆ ಪತ್ರ ಬರೆದು, ಭಾರತದಿಂದ ಬೀಫ್ / ಎಮ್ಮೆ ಮಾಂಸ ಆಮದು ಮತ್ತೆ ಪ್ರಾರಂಭಿಸಲು ಕೇಳಿ ಕೊಂಡಿತ್ತು ಎಂದು ವರದಿಯಾಗಿತ್ತು.
"ಸಂಘಿಗಳು ನಿರಂತರವಾಗಿ ಜಾನುವಾರು ಮಾರಾಟ ಮಾಡುವ ಮುಸ್ಲಿಂ ವ್ಯಾಪಾರಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರಗಳು ಗೋಮಾಂಸ ನಿಷೇಧಿಸಿವೆ ಹಾಗೂ ವಧಾಲಯಗಳನ್ನು ಮುಚ್ಚಿವೆ. ಆದರೆ ಸರ್ಕಾರ ದೊಡ್ಡ ಮಾಂಸ ವ್ಯಾಪಾರಿಗಳಿಗೆ ಹಣ ಮಾಡಲು ನೆರವು ನೀಡಲು ಮುಂದಾಗಿದೆ" ಎಂದು ಒವೈಸಿ ಟ್ವೀಟ್ ಮಾಡಿದ್ದಾರೆ.
ಕಳೆದ ಕೆಲವು ತಿಂಗಳಿಂದ ಭಾರತೀಯ ರಫ್ತುದಾರರು ಮತ್ತು ಬಾಂಗ್ಲಾದೇಶಿ ಆಮದುದಾರರ ಸಂಘ, ಆಮದು ನೀತಿ ಬದಲಾದ ವಿಚಾರದಲ್ಲಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಶೀತಲೀಕೃತ ಬೀಫ್ ಅನ್ನು ಆಮದು ಮಾಡಿಕೊಳ್ಳುತ್ತಿಲ್ಲ ಎಂದು ಭಾರತೀಯ ಹೈಕಮಿಷನ್ ಬರೆದ ಪತ್ರದಲ್ಲಿ ವಿವರಿಸಲಾಗಿದೆ ಎಂದು ತಿಳಿದು ಬಂದಿದೆ.
Meat shops are shut down for "religious sentiments" but Modi has no problem making money off of gosht. 2/2
— Asaduddin Owaisi (@asadowaisi) July 21, 2022