ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ: ಗುಣಪಾಲ ಕಡಂಬ
ʼತೇಜೋವಧೆ ಮಾಡಲು ಇಡೀ ವ್ಯವಸ್ಥೆಯನ್ನೇ ದೂರುವುದು ಖೇದಕರʼ
ಮಂಗಳೂರು, ಜು. 22: ಮೂಡುಬಿದಿರೆಯ ಕಂಬಳ ಓಟಗಾರ ಶ್ರೀನಿವಾಸ ಗೌಡ ಮತ್ತು ನನ್ನ ವಿರುದ್ಧ ಲೋಕೇಶ್ ಶೆಟ್ಟಿ ಎಂಬವರು ನೀಡಿರುವ ದೂರು ತೇಜೋವಧೆ ಮಾಡುವ ಉದ್ದೇಶದ್ದಾಗಿದೆ. ಈ ಮೂಲಕ ಇಡೀ ವ್ಯವಸ್ಥೆಯನ್ನೇ ದೂರಿರುವುದು ಖೇದಕರ ಎಂದು ಕಂಬಳ ಅಕಾಡೆಮಿಯ ಗುಣಪಾಲ ಕಡಂಬ ಪ್ರತ್ಯಾರೋಪ ಮಾಡಿದ್ದಾರೆ.
ಸುದ್ದಿ ಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಮೂಡಬಿದಿರೆ ಠಾಣೆಯಲ್ಲಿ ನೀಡಿರುವ ದೂರು ಸತ್ಯಕ್ಕೆ ದೂರವಾಗಿದೆ. ಮಾತ್ರವಲ್ಲದೆ ನಮ್ಮ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ. ಅಂತಹ ಯಾವುದೇ ಮೋಸ, ವಂಚನೆ ನಡೆದಿಲ್ಲ ಎಂದರು.
ಕಂಬಳದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಲೇಸರ್ ಬೀಮ್ ನೆಟ್ವರ್ಕ್ ಸಿಸ್ಟಮ್ ಅಳವಡಿಸಲಾಗಿದೆ. ಬಳಿಕ ಇಲೆಕ್ಟ್ರಾನಿಕ್ ಟೈಮಿಂಗ್ ವ್ಯವಸ್ಥೆ ಅಳವಡಿಸಲಾಗಿತ್ತು. ಕಳೆದ ಒಂಭತ್ತು ವರ್ಷಗಳಿಂದ ಈ ವ್ಯವಸ್ಥೆ ಜಾರಿಯಲ್ಲಿದೆ. ಈ ವ್ಯವಸ್ಥೆಯನ್ನು ಕಾಸರಗೋಡಿನ ಪೈವಳಿಕೆ ಕಂಬಳಕ್ಕೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಬೆಂಗಳೂರು ಘಟಕದ ಮುಖ್ಯಸ್ಥ ಕರ್ನಲ್ ಸಂಜಯ್ ಮತ್ತು ಅವರ ತಂಡ ಬಂದು ವ್ಯವಸ್ಥೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ನನ್ನ ಮುಂದಾಳತ್ವದ ಕಂಬಳ ಅಕಾಡೆಮಿಯ ಚಟುವಟಿಕೆಗಳನ್ನು ಸಹಿಸದ ಮತ್ತು ನನ್ನ ವೈಯಕ್ತಿಕ ಶ್ರೇಯಸ್ಸು ಸಹಿಸದೆ ಈ ದೂರು ನೀಡಲಾಗಿದೆ ಎಂದು ಅವರು ಆರೋಪಿಸಿದರು.
ಶ್ರೀನಿವಾಸ ಗೌಡರು ಸಾಧನೆ ಮಾಡಿದಾಗ ಅವರನ್ನು ಹುಸೇನ್ ಬೋಲ್ಟ್ ಗೆ ಹೋಲಿಸಿ ನಾವು ಪತ್ರಿಕಾ ಪ್ರಕಟಣೆ ನೀಡಿಲ್ಲ. ಖ್ಯಾತ ನಿರ್ದೇಶಕರೊಬ್ಬರು ಕಂಬಳದ ಬಗ್ಗೆ ಚಲನ ಚಿತ್ರ ಮಾಡುತ್ತಿದ್ದು ಇದಕ್ಕೆ ಎಲ್ಲಾ ಪೂರಕ ಮಾಹಿತಿ ನೀಡಿದ್ದೇನೆ. ಸಿನೆಮಾದಲ್ಲಿ ಶ್ರೀನಿವಾಸ ಗೌಡ ಪ್ರಧಾನ ಪಾತ್ರ ನಿರ್ವಹಿಸುತ್ತಿರುವುದರಿಂದ ಅವರ ವರ್ಚಸ್ಸು ಕುಗ್ಗಿಸಲು ಅಕಾಡೆಮಿಯ ವಿರುದ್ಧ ಲೇಸರ್ ಬೀಮ್ ಸಿಸ್ಟಮನ್ನು ದೂರಲಾಗುತ್ತಿದೆ. ಕಂಬಳದ ಮ್ಯೂಸಿಯಂ ಮಾಡಬೇಕೆಂಬ ಇರಾದೆ ನನ್ನದು. ಅದಕ್ಕಾಗಿ ಅದಾನಿ ಗ್ರೂಪ್ 50 ಲಕ್ಷ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ದೇಣಿಗೆ ಪಡೆದಿರುವುದಾಗಿಯೂ ಸುಳ್ಳು ಆರೋಪ ಮಾಡಲಾಗಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯ ಸುರೇಶ್ ಕೆ. ಪೂಜಾರಿ ಮತ್ತು ರತ್ನಾಕರ್ ಉಪಸ್ಥಿತರಿದ್ದರು.