ʼಸಂತೋಷ್ ಪಾಟೀಲರ ಪತ್ನಿಯ ಕಣ್ಣೀರಾದರೂ ಒರೆಸುವ ಪ್ರಯತ್ನ ಮಾಡಿʼ
ರಾಜ್ಯ ಸರಕಾರಕ್ಕೆ ಯು.ಟಿ.ಖಾದರ್ ಮಾತಿನ ಪ್ರಹಾರ

ಉಡುಪಿ : ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲರ ಜೀವವನ್ನು ಉಳಿಸಲು ನಿಮಗೆ ಆಗಲಿಲ್ಲ. ಕನಿಷ್ಠ ಅವರ ಪತ್ನಿಯ ಕಣ್ಣೀರನ್ನಾದರೂ ಒರೆಸುವ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಮಾಜಿ ಸಚಿವ ಹಾಗೂ ವಿಧಾನಸಭೆಯಲ್ಲಿ ವಿಪಕ್ಷದ ಉಪನಾಯಕ ಯು.ಟಿ.ಖಾದರ್ ಅವರು ರಾಜ್ಯ ಸರಕಾರಕ್ಕೆ ಮಾತಿನ ಮೂಲಕ ಪ್ರಹಾರ ನೀಡಿದಾರೆ.
ಬ್ರಹ್ಮಾವರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಇಂದು ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರಿಗೆ ಕ್ಲೀನ್ಚಿಟ್ ದೊರೆತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಖಾದರ್, ನಡೆದಿರುವ ತನಿಖೆ ಸಮರ್ಪಕವಾಗಿಲ್ಲ ಎಂದು ಪತ್ನಿ ವಾರದ ಹಿಂದೆಯೇ ರಾಜ್ಯಪಾಲರಿಗೆ ದೂರು ನೀಡಿದ್ದರು ಎಂದರು.
ಗಂಡನನ್ನು ಕಳೆದುಕೊಂಡ ನೊಂದ ಮಹಿಳೆಯೊಬ್ಬರು ನ್ಯಾಯವನ್ನು ಕೇಳುತಿದ್ದಾರೆ. ಈ ಸಹೋದರಿಗೆ ನ್ಯಾಯ ದೊರಕಿಸಿಕೊಡುವುದು ರಾಜ್ಯಪಾಲರ ಕರ್ತವ್ಯ ಹಾಗೂ ರಾಜ್ಯಸರಕಾರದ ಜವಾಬ್ದಾರಿಯಾಗಿದೆ ಎಂದರು. ಗಂಡನ ಜೀವವನ್ನಂತೂ ಉಳಿಸಲಾಗಲಿಲ್ಲ. ಈಗ ಸಮರ್ಪಕವಾದ, ನೊಂದ ಕುಟುಂಬಕ್ಕೆ ವಿಶ್ವಾಸ ಮೂಡುವಂತೆ ತನಿಖೆ ನಡೆಸುವ ಮೂಲಕ ಅವರ ಕಣ್ಣೀರು ಒರೆಸುವ ಕೆಲಸ ಮಾಡುವಂತೆ ಕೋರಿದರು.
ಸಮರ್ಪಕ ತನಿಖೆ ಮೂಲಕ ಮನೆಯವರಿಗೆ ಕನಿಷ್ಠ ಸಮಾಧಾನವಾಗುವಂತೆ ನೋಡಿಕೊಳ್ಳಿ. ಈ ಮೂಲಕ ನಾವು ನಿಮ್ಮ ಜೊತೆಗಿದ್ದೇವೆ ಎಂದು ರಾಜ್ಯದ ಮಹಿಳೆಯರಿಗೆ ಗೌರವದ ಸಂದೇಶವನ್ನಾದರೂ ತಲುಪಿಸಿ ಎಂದ ಖಾದರ್, ಈ ಪ್ರಕರಣದಲ್ಲಿ ಸಹೋದರಿಗೆ ನ್ಯಾಯ ಸಿಗದಿದ್ದರೆ ಬಿಜೆಪಿ ಇಡೀ ಕರ್ನಾಟಕದ ಮಹಿಳೆಯರಿಗೆ ಮಾಡುವ ದ್ರೋಹವಾಗಿರುತ್ತದೆ. ಇದಕ್ಕೆ ರಾಜ್ಯದ ಮಹಿಳೆಯರು ಬಿಜೆಪಿಗೆ ತಕ್ಕ ಕಲಿಸುತ್ತಾರೆ ಎಂದರು.
ಝಮೀರ್ ಹೇಳಿಕೆ: ಒಂದು ಸಮುದಾಯದ ಬೆಂಬಲವಿದ್ದರೆ ಸಿಎಂ ಆಗಲು ಸಾಧ್ಯವಿಲ್ಲ ಎಂಬ ಝಮೀರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಖಾದರ್, ಎಲ್ಲಾ ಸಮುದಾಯವನ್ನು ವಿಶ್ವಾಸದಿಂದ ತೆಗೆದುಕೊಂಡು ಹೋಗಿ ಎಂಬ ಅರ್ಥದಲ್ಲಿ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. ಸಮಪಾಲು ಸಮಬಾಳು ಎಂಬ ಅರ್ಥದಲ್ಲಿ ಝಮೀರ್ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಜೊತೆ ಎಲ್ಲಾ ವರ್ಗ ಸಮುದಾಯದವರು ಇದ್ದಾರೆ ಎಂದರು.
ಬಿಜೆಪಿ ಲಿಂಗಾಯತ, ಒಕ್ಕಲಿಗ, ಎಸ್ಸಿ, ಎಸ್ಟಿ ಯಾರಿಗೂ ಏನು ಮಾಡಿಲ್ಲ. ಆದರೆ ಕಾಂಗ್ರೆಸ್ ೨೦೧೩-೧೮ರ ಐದು ವರ್ಷಗಳ ಅವಧಿಯಲ್ಲಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಎಲ್ಲಾ ಸಮುದಾಯದವರು ನೆಮ್ಮದಿಯಿಂದ ಜೀವನ ನಡೆಸುವಂತೆ ಆಡಳಿತ ಕೊಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯರ 75ನೇ ಹುಟ್ಟುಹಬ್ಬದ ಬಗ್ಗೆ ಎದ್ದಿರುವ ವಿವಾದದ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಾದರ್, ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರು ಸಮಾವೇಶದಲ್ಲಿ ಭಾಗವಹಿಸುತ್ತಾರೆ. ಸ್ವತಹ ಡಿಕೆ ಶಿವಕುಮಾರ್ ಅವರೇ ಈ ಬಗ್ಗೆ ಕರೆಕೊಟ್ಟಿದ್ದಾರೆ. ಸಮಾವೇಶದಲ್ಲಿ ಸಿದ್ದರಾಮಯ್ಯ ಆಡಳಿತರ ಐದು ವರ್ಷದ ಆಡಳಿತ ಮತ್ತು ಈಗಿನ ಬಿಜೆಪಿ ಆಡಳಿತವನ್ನು ಜನರ ಮುಂದಿಡಲಾಗುತ್ತದೆ ಎಂದರು.
ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು 75ನೇ ಹುಟ್ಟುಹಬ್ಬವನ್ನಾಚರಿಸಿದಾಗ ಎಲ್ಲರೂ ಹೋಗಿ ಅಭಿನಂದಿಸಿದ್ದೇವೆ. ಆದರೆ ಬಿಜೆಪಿಗೆ ಸಿದ್ದರಾಮಯ್ಯರ ಬಗ್ಗೆ ಭಯಕಾಡುತ್ತಿದೆ. ಹೀಗಾಗಿ ಅವರು ಎಲ್ಲವನ್ನೂ ವಿವಾದ ಮಾಡುತಿದ್ದಾರೆ ಎಂದರು.