ಶಿರ್ವ ಗ್ರಾಪಂನಲ್ಲಿ ರಾಷ್ಟ್ರಧ್ವಜ ಸಂಹಿತೆ ಮಾಹಿತಿ, ಪ್ರಾತಿಕ್ಷಿಕೆ

ಶಿರ್ವ : ಶಿರ್ವ ಗ್ರಾಮ ಪಂಚಾಯತ್ ವತಿಯಿಂದ ರಾಷ್ಟ್ರಧ್ವಜ ಸಂಹಿತೆ ಮಾಹಿತಿ, ಪ್ರಾತಿಕ್ಷಿಕೆ ಕಾರ್ಯಕ್ರಮವನ್ನು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿರ್ವ ಗ್ರಾಪಂ ಅಧ್ಯಕ್ಷ ಕೆ.ಆರ್.ಪಾಟ್ಕರ್ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭಾವಸರದಲ್ಲಿ ಸರಕಾರದ ಸುತ್ತೋಲೆಯಂತೆ ಆ.೧೧ರಿಂದ ೧೭ರ ವರೆಗೆ ಪ್ರತೀ ಮನೆಮನೆಗಳಲ್ಲಿ ರಾಷ್ಟಧ್ವಜ ಹಾರಿಸಿ ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಿಗೊಳಿಸಬೆಕೆಂಬ ಉದ್ದೇಶದಿಂದ ಈ ಕಾರ್ಯ ಕ್ರಮ ನಡೆಸಲಾಗಿದೆ. ಶಿರ್ವ ಗ್ರಾಪಂ ವ್ಯಾಪ್ತಿಯ ಎಲ್ಲಾ ಶಿಕ್ಷಣ ಸಂಸ್ಥೆಗಳು, ಸಮಾಜ ಸೇವಾ ಸಂಘಟನೆಗಳು, ಯುವಕ/ಯುವತಿ ಮಂಡಲ, ಅಂಗನವಾಡಿ ಪ್ರತಿನಿಧಿಗಳಿಗೆ ಈ ಬಗ್ಗೆ ತಿಳುವಳಿಕೆ ನೀಡಲಾಗುತ್ತದೆ ಎಂದರು.
ಉಡುಪಿ ಜಿಲ್ಲಾ ಭಾರತ ಸೇವಾದಳದ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ರಾಷ್ಟ್ರಧ್ವಜ ಸಂಹಿತೆ ಮಾಹಿತಿ ಪ್ರತಿಯೊಬ್ಬರೂ ಅರಿತು ಕೊಳ್ಳಬೇಕು. ದೇಶಪ್ರೇಮದ ಪ್ರತೀಕವಾಗಿ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಹೊಸ್ತಿಲಲ್ಲಿ ಪ್ರತೀ ಮನೆಮನೆಗಳಲ್ಲೂ ರಾಷ್ಟ್ರಧ್ವಜ ಅರಳ ಬೇಕು. ಇದು ದೇಶಕ್ಕೆ ನಾವು ಸಲ್ಲಿಸುವ ಗೌರವ ಎಂದು ಹೇಳಿದರು.
ಭಾರತ ಸೇವಾದಳದ ಕೇಂದ್ರ ಸಮಿತಿಯ ಸದಸ್ಯ ಆರೂರು ತಿಮ್ಮಪ್ಪ ಶೆಟ್ಟಿ ರಾಷ್ಟ್ರಧ್ವಜ ಸಂಹಿತೆ ಮಾಹಿತಿ, ಹಾಗೂ ಪ್ರಾತಿಕ್ಷಿಕೆ ಮಾಹಿತಿ ನೀಡಿದರು. ಭಾರತ ಸೇವಾದಳದ ಹಿರಿಯ ಸದಸ್ಯ ಬಿ.ಪುಂಡಲೀಕ ಮರಾಠೆ ಸಮರೋಪ ಭಾಷಣ ಮಾಡಿದರು. ಗ್ರಾಪಂ ಉಪಾಧ್ಯಕ್ಷೆ ಗ್ರೇಸಿ ಕರ್ಡೋಜ, ಪಂಚಾಯತ್ ಸದಸ್ಯರು, ವಿವಿಧ ಶಿಕ್ಷಣ ಹಾಗೂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್ ಕಾರ್ಯ ಕ್ರಮ ನಿರೂಪಿಸಿ ಸ್ವಾಗತಿಸಿದರು. ಪಂಚಾಯತ್ ಕಾರ್ಯದರ್ಶಿ ಚಂದ್ರಮಣಿ ವಂದಿಸಿದರು.