ಗುಂಪುಗಾರಿಕೆ ಬಿಟ್ಟು ಕಾಂಗ್ರೆಸ್ ಪಕ್ಷ ಉಳಿಸೋಣ: ಅಭಯಚಂದ್ರ ಜೈನ್

ಉಡುಪಿ, ಜು.23: ಕಾಂಗ್ರೆಸ್ ಪಕ್ಷ ಗುಂಪುಗಾರಿಕೆಯಿಂದ ಹಾಳಾಗುತ್ತಿದೆ. ಇನ್ನು ಅದೆಲ್ಲ ಬೇಡ. ಗುಂಪುಗಾರಿಕೆ ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಉಳಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಅಭಯಚಂದ್ರ ಜೈನ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಕಾರ್ಯಕರ್ತರು ಭಾಗ ವಹಿಸುವ ಬಗ್ಗೆ ಪೂರ್ವಭಾವಿ ಸಮಾಲೋಚನೆ ನಡೆಸಲು ಶನಿವಾರ ಉಡುಪಿ ಕಾಂಗ್ರೆಸ್ ಭವನದಲ್ಲಿ ಕರೆದ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಬಡವರು, ಶೋಷಿತರ ಉದ್ಧಾರಕ್ಕಾಗಿ ನಾವು ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಬಿಜೆಪಿಯನ್ನು ಸೋಲಿಸಲು ನಮಗೆ ಬೂತ್ ಮಟ್ಟದಲ್ಲಿನ ನಿಷ್ಠಾವಂತ ಕಾರ್ಯಕರ್ತರಿದ್ದರೆ ಸಾಕಾಗುತ್ತದೆ. ಆದರೆ ಇಂದು ನಮಗೆ ಕಾರ್ಯ ಕರ್ತರ ಕೊರತೆ ಇದೆ. ಅದನ್ನು ನೀಗಿಸುವ ಕಾರ್ಯ ಮಾಡಬೇಕು ಎಂದರು.
ಬಿಜೆಪಿಯವರು ಕಾಂಗ್ರೆಸ್ ಪಕ್ಷವನ್ನು ಸುಳ್ಳಿನ ಗೋಪುರಗಳಿಂದ ಸೋಲಿಸುತ್ತಿದ್ದಾರೆ. ಸುಳ್ಳು ಹಾಗೂ ಭ್ರಷ್ಟ ಬಿಜೆಪಿಯನ್ನು ಸೋಲಿಸಲು ನಾವೆಲ್ಲ ಗುಂಪುಗಾರಿಕೆ ಯನ್ನು ಬಿಟ್ಟು ಒಂದಾಗಬೇಕು. ಒಗ್ಗಟ್ಟಿನ ಮೂಲಕ ಹೋರಾಟ ನಡೆಸಿದರೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಖಚಿತವಾಗಿರುತ್ತದೆ ಎಂದು ಅವರು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಧು ಬಂಗಾರಪ್ಪ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ, ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿದರು.
ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಮುಖಂಡ ರಾದ ಪ್ರಖ್ಯಾತ್ ಶೆಟ್ಟಿ, ವರೋನಿಕಾ ಕರ್ನೆಲಿಯೋ, ರಮೇಶ್ ಕಾಂಚನ್, ಗೀತಾ ವಾಗ್ಳೆ, ಜ್ಯೋತಿ ಹೆಬ್ಬಾರ್, ರೋಶನಿ ಒಲಿವೇರಾ, ಸರಸು ಡಿ.ಬಂಗೇರ, ಹಬೀಬ್ ಅಲಿ, ಕೀರ್ತಿ ಶೆಟ್ಟಿ, ಪ್ರಶಾಂತ್ ಜತ್ತನ್ನ, ಎಂ.ಪಿ.ಮೊದಿನಬ್ಬ, ಇಸ್ಮಾಯಿಲ್ ಅತ್ರಾಡಿ, ಕುಶಲ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಅಣ್ಣಯ್ಯ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.