ಬೆಳೆಹಾನಿ ಪರಿಹಾರಕ್ಕೆ ಕೃಷಿಕರಿಂದ ಉಡುಪಿ ಜಿಲ್ಲಾಡಳಿತಕ್ಕೆ ಮನವಿ

ಉಡುಪಿ : ಈ ತಿಂಗಳುದ್ದಕ್ಕೂ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೇಸಾಯ ಹಾಗೂ ಕೊಳೆರೋಗಕ್ಕೆ ತುತ್ತಾದ ಅಡಿಕೆ-ಕಾಳುಮೆಣಸು ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಕೋರಿ ಜಿಲ್ಲೆಯ ಕೃಷಿಕರ ಪರವಾಗಿ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಿ ಒತ್ತಾಯಿಸಿದೆ.
ಸುಮಾರು ಒಂದು ತಿಂಗಳುಗಳ ಕಾಲ ಸುರಿದ ವಿಪರೀತ ಮಳೆಯಿಂದ ಜಿಲ್ಲೆಯಾದ್ಯಂತ ಕೃಷಿ ಭೂಮಿಗಳೆಲ್ಲಾ ಮುಳುಗಿವೆ. ಅನೇಕ ರೈತರ ಮನೆ, ಕೊಟ್ಟಿಗೆ ಗಳು ಮಳೆಯಿಂದ ಕುಸಿದಿವೆ. ಗಾಳಿಗೆ ಅಡಿಕೆ, ಬಾಳೆ ಮೊದಲಾದ ಧರಾಶಾಹಿಯಾಗಿವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಈ ಬಾರಿ ತಡವಾಗಿ ಪ್ರಾರಂಭಗೊಂಡ ಭತ್ತದ ಬೇಸಾಯ ವೇಗ ಪಡೆದು ಕೊಳ್ಳುತ್ತಿರುವಾಗಲೇ ಅತೀ ಮಳೆ ಸುರಿದು, ನೆರೆ ಬಂದು, ನಾಟಿ ಮಾಡಿದ ಭತ್ತದ ಗಿಡಗಳೆಲ್ಲಾ ಕೊಚ್ಚಿ ಹೋಗಿವೆ. ಇನ್ನೂ ಕೆಲವು ಕಡೆ ಕಳೆದ ಹತ್ತು ದಿನಗಳಿಂದ ನೆರೆ ನೀರು ನಿಂತು ನಾಟಿ ಮಾಡಿದ ಭತ್ತದ ಸಸಿಗಳು ಕೊಳೆತು ಹೋಗಿವೆ. ನೆಟ್ಟಿಗೆ ತಯಾರಿಸಿಟ್ಟಿದ್ದ ನೇಜಿಗಳು ಕೂಡ ಉಪಯೋಗಕ್ಕೆ ಬಾರದೆ ಹಾಳಾಗಿವೆ ಎಂದು ಮನವಿ ತಿಳಿಸಿದೆ.
ಈಗಾಗಲೇ ಜುಲೈ ಕೊನೆಯಾಗಿದ್ದು, ಇನ್ನು ಹೊಸದಾಗಿ ಬೀಜ ಬಿತ್ತಿ, ನೆಟ್ಟಿ ಮಾಡುವುದು ಸಾಧ್ಯವಾಗದ ಮಾತು. ಇನ್ನೊಂದೆಡೆ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಸಮರ್ಪಕವಾಗಿ ಔಷದ ಸಿಂಪಡಣೆ ಮಾಡಲಾಗದ ಕಾರಣ ತೋಟಗಳಲ್ಲಿ ವಿಪರೀತ ಕೊಳೆರೋಗ ಪ್ರಾರಂಭವಾಗಿದೆ. ಮಳೆಗಾಲಕ್ಕೂ ಮುಂಚೆ ಸುರಿದ ಅಕಾಲಿಕ ಮಳೆಯಿಂದ ಈ ಬಾರಿ ಗೇರು ಬೆಳೆ ಕೂಡ ಹಾಳಾಗಿದ್ದು, ಬೆಳೆಗಾರರು ನಷ್ಟ ಅನುಭಸಿದ್ದಾರೆ. ಈ ಎಲ್ಲಾ ಅಂಶಗಳ ಬಗ್ಗೆ ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿ ನಿರ್ಣಯ ಕೈಗೊಂಡು ವೆಚ್ಟವನ್ನು ಭರಿಸಿ ಕೊಡುವ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಭತ್ತದ ಕೃಷಿಗೆ ರೈತರು ಸಾಕಷ್ಟು ಹಣ ವ್ಯಯ ಮಾಡಿದ್ದು, ನಾಟಿ ಮಾಡಿದ ಗಿಡಗಳು ಕೊಳೆತು ಹೋಗಿವೆ. ಆ ಕಾರಣಕ್ಕೆ ಪ್ರತೀ ಎಕರೆಗೆ ಕನಿಷ್ಟ 20,000 ರೂ. ಪರಿಹಾರ ನೀಡಬೇಕು. ಅದೇ ರೀತಿ ಕೊಳೆ ರೋಗದಿಂದ ನಷ್ಟ ಅನುಭವಿಸಿದ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರಿಗೆ ಪ್ರಾಕೃತಿಕ ವಿಕೋಪದಡಿಯಲ್ಲಿ ಪರಿಹಾರ ನೀಡಬೇಕು ಎಂದು ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಸಂಘದ ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ವೀಣಾ ಅವರು ಸರಕಾರದ ಮಾರ್ಗದರ್ಶನದಂತೆ ಖಂಡಿತ ಪರಿಹಾರ ನೀಡಲಾಗುವುದು. ರೈತರು ತಮಗಾದ ನಷ್ಟಗಳ ಬಗ್ಗೆ ತಹಶೀಲ್ದಾರರಿಗೆ, ತೋಟಗಾರಿಕೆ ಮತ್ತು ಕೃಷಿ ಇಲಾಖೆಗೆ ಮನವಿ ಸಲ್ಲಿಸಿದಲ್ಲಿ ಆದಷ್ಟು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ನಿಯೋಗಕ್ಕೆ ಭರವಸೆ ನೀಡಿದರು.
ಭಾಕಿಸಂ ಅಧ್ಯಕ್ಷ ನವೀನ್ಚಂದ್ರ ಜೈನ್ ನೇತೃತ್ವದ ನಿಯೋಗದಲ್ಲಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಸತ್ಯನಾರಾಯಣ ಉಡುಪ, ವಾಸುದೇವ ಶ್ಯಾನುಭಾಗ್, ಉಮಾನಾಥ ರಾನಡೆ, ಗೋವಿಂದರಾಜ್ ಭಟ್, ಚಂದ್ರಹಾಸ ಶೆಟ್ಟಿ, ಹರೀಶ್ ಕುಮಾರ್, ಕೆ.ಪಿ. ಭಂಡಾರಿ, ದೀಪಕ್ ಪೈ, ಎಸ್.ಎನ್. ಭಟ್ ಮೊದಲಾದವರು ಭಾಗವಹಿಸಿದ್ದರು.