‘ಶಕ್ತಿಯಿಂದ ಭಕ್ತಿಯೆಡೆಗೆ ಕನಕ ಚಿಂತನೆ’ ಉಪನ್ಯಾಸ

ಬ್ರಹ್ಮಾವರ : ಕನಕ ಚಿಂತನೆಯನ್ನು ನಾವು ಎರಡು ಹಂತಗಳಲ್ಲಿ ವಿಶ್ಲೇಷಿಸಬೇಕು. ಮೊದಲು ಅವರು ಶಕ್ತಿ ಕೇಂದ್ರದ ಭಾಗವಾಗಿ ದಂಡನಾಯಕ ರಾಗಿದ್ದವರು. ನಂತರದ ದಿನಗಳಲ್ಲಿ ಅವರು ಭಕ್ತಿ ಕೇಂದ್ರಿತವಾದ ಜೀವನದತ್ತ ಹೊರಳಿದರು ಎಂದು ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕರಬ ಹೇಳಿದ್ದಾರೆ.
ಅವರು ಮಾಹೆಯ ಕನಕದಾಸ ಅಧ್ಯಯನ ಸಂಶೋಧನ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಹಿರಿಯ ನಾಗರಿಕರ ವೇದಿಕೆ ಬ್ರಹ್ಮಾವರ, ಲಯನ್ಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರು ಇವರ ಸಹಯೋಗದೊಂದಿಗೆ ಬ್ರಹ್ಮಾವರದ ಹಿರಿಯ ನಗರಿಕರ ವೇದಿಕೆ ಸಭಾಭವನದಲ್ಲಿ ಏರ್ಪಡಿಸಿದ ವಿಸ್ತರಣಾ ಉಪನ್ಯಾಸ ಮಾಲಿಕೆಯಲ್ಲಿ ಮೂರನೇ ‘ಶಕ್ತಿಯಿಂದ ಭಕ್ತಿಯೆಡೆಗೆ ಕನಕ ಚಿಂತನೆ’ ವಿಷಯದ ಕುರಿತು ಮಾತನಾಡುತ್ತಿದ್ದರು.
ಜೀವನದಲ್ಲಿ ಭಕ್ತಿಯಿಂದ ಏನನ್ನಾದರೂ ಸಾಧಿಸಬಹುದೆಂಬುದನ್ನು ಪ್ರತಿಪಾದಿಸಿದ ಕನಕದಾಸರ ಕಾವ್ಯಗಳಲ್ಲಿ, ಸಮಾಜದ ಕೆಡುಕುಗಳೊಂದಿಗೆ ವಿಜಯನಗರ ಕಾಲದ ಇತಿಹಾಸದ ಅಂಶಗಳನ್ನು ಗಮನಿಸಬಹುದು ಎಂದು ವಿವರಿಸಿದರು.
ಬ್ರಹ್ಮಾವರ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕನಕದಾಸ ಅಧ್ಯಯನ ಸಂಶೋಧನ ಪೀಠ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ವರದಾನಂದ ಶೆಟ್ಟಿ ವಂದಿಸಿ, ಪ್ರೊ.ಜಿ. ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.