ಸುರತ್ಕಲ್ ಟೋಲ್ಗೇಟ್ ತೆರವಿಗೆ ಆಗ್ರಹಿಸಿ ಸೆ.13ರಂದು ಧರಣಿ

ಮಂಗಳೂರು, ಆ.26: ಟೋಲ್‌ಗೇಟ್ (Toll Gate) ತೆರವಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳ ಬಾಯಿಮಾತಿನ ಹೇಳಿಕೆಯನ್ನು ನಂಬಲು ಸಾಧ್ಯವಿಲ್ಲ. ಆದ್ದರಿಂದ ರಾ.ಹೆ. ಪ್ರಾಧಿಕಾರ ಅಥವಾ ದ.ಕ. ಜಿಲ್ಲಾಡಳಿತ ಅಧಿಕೃತವಾಗಿ ಟೋಲ್‌ಗೇಟ್ ತೆರವಿನ ಬಗ್ಗೆ ದಿನಾಂಕವನ್ನು ಘೋಷಿಸಬೇಕು ಎಂದು ಆಗ್ರಹಿಸಿ ಸೆ.13ರಂದು ಟೋಲ್‌ಗೇಟ್ ಮುಂದೆ ಧರಣಿ ನಡೆಸಲಾಗುವುದು ಎಂದು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆಯೇ ಜನಪ್ರತಿನಿಧಿಗಳು, ಅಧಿಕಾರಿಗಳು ಟೋಲ್‌ಗೇಟ್ ತೆರವಿನ ಬಗ್ಗೆ ನೀಡಿದ ಹೇಳಿಕೆಗಳು ಹುಸಿಯಾಗಿವೆ. ಮೊನ್ನೆಯೂ ದಿಶಾ ಸಭೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಿಂಗಳೊಳಗೆ ಟೋಲ್‌ಗೇಟ್ ತೆರವುಗೊಳಿಸಲಾಗುವುದು ಎಂದಿದ್ದಾರೆ. ಆದರೆ ನಿರ್ದಿಷ್ಟ ದಿನಾಂಕ ತಿಳಿಸಿಲ್ಲ. ಹಾಗಾಗಿ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ ಸ್ಪಷ್ಟವಾಗಿ ದಿನಾಂಕ ಪ್ರಕಟಿಸಬೇಕು. ಇಲ್ಲದಿದ್ದರೆ ಟೋಲ್‌ಗೇಟ್‌ಗೆ ಮುತ್ತಿಗೆ ಹಾಕುವ ದಿನಾಂಕವನ್ನು ಸೆ.13ರಂದು ನಾವೇ ಘೋಷಿಸುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖಂಡರಾದ ದಿನೇಶ್ ಹೆಗ್ಡೆ ಉಳೆಪ್ಪಾಡಿ, ಪುರುಷೋತ್ತಮ ಚಿತ್ರಾಪುರ, ರಘು ಎಕ್ಕಾರು, ಎಂಜಿ ಹೆಗ್ಡೆ, ಪ್ರತಿಭಾ ಕುಳಾಯಿ, ಬಿ.ಕೆ.ಇಮ್ತಿಯಾಝ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಬೆಳ್ತಂಗಡಿ: ದ್ವಿಚಕ್ರ ವಾಹನ ಸವಾರನ ಮೇಲೆ ಕಾಡುಕೋಣ ದಾಳಿ
