ಪ್ರಧಾನಿ ಭೇಟಿ ಹಿನ್ನೆಲೆ | ಬಂಗ್ರಕೂಳೂರಿನ ಟೆಂಟ್ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ: ಜಿಲ್ಲಾಧಿಕಾರಿ
| ತಾತ್ಕಾಲಿಕ ವಸತಿ, ಊಟಕ್ಕೆ ವ್ಯವಸ್ಥೆ | ಬಯಸಿದರೆ ಶಾಶ್ವತ ಪುನರ್ವಸತಿ ಯೋಜನೆ

ಮಂಗಳೂರು, ಆ.29: ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಸೆ.2ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಗಾಗಿ, ಪಾರ್ಕಿಂಗ್ ಮತ್ತು ಇತರ ಕಾರ್ಯಕ್ರಮ ಸಂಬಂಧಿತ ಅವಶ್ಯಕತೆಗಳಿಗಾಗಿ ಲಭ್ಯವಿರುವ ಪ್ರತಿಯೊಂದು ಸ್ಥಳವನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಆ ಕಾರಣಕ್ಕಾಗಿ ಬಂಗ್ರ ಕೂಳೂರಿನ ಗುರುದ್ವಾರದಲ್ಲಿ ಟೆಂಟ್ ಹಾಕಿ ವಾಸಿಸುತ್ತಿದ್ದವರನ್ನು ಪೊಲೀಸರು ಸ್ಥಳಾಂತರಗೊಳ್ಳಲು ಕೇಳಿಕೊಂಡಿದ್ದಾರೆ. ಅಲ್ಲಿದ್ದವರಿಗೆ ಸ್ಥಳೀಯ ಕಾರ್ಪೊರೇಟರ್ ನೆರವಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಈ ಬಗ್ಗೆ 'ವಾರ್ತಾಭಾರತಿ' "ಪ್ರಧಾನಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆ; ಬಂಗ್ರಕೂಳೂರಿನ ಟೆಂಟ್ ನಿವಾಸಿಗಳ ಎತ್ತಂಗಡಿ" ಎಂಬ ತಲೆಬರಹದಲ್ಲಿ ಸುದ್ದಿ,ವೀಡಿಯೊ ವರದಿ ಎಂದು ವರದಿ ಪ್ರಕಟಿಸಿತ್ತು.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ; ಬಂಗ್ರಕೂಳೂರಿನ ಟೆಂಟ್ ನಿವಾಸಿಗಳ ಎತ್ತಂಗಡಿ
ಅದಲ್ಲದೆ ಅವರಿಗೆ ತಹಶೀಲ್ದಾರ್ ಮತ್ತು ಇತರ ಕಾರ್ಮಿಕ ಇಲಾಖೆ ಸಿಬ್ಬಂದಿಯು ಊಟ ಸೇರಿದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅವರನ್ನು ಭೇಟಿ ಮಾಡಲಿದ್ದಾರೆ. ಆ ಕುಟುಂಬಗಳೊಂದಿಗೆ ಚರ್ಚಿಸಿದ ನಂತರ ಇಲ್ಲಿ ನೆಲೆಸಲು ಆಸಕ್ತಿ ತೋರಿದರೆ ಅವರಿಗೆ ಶಾಶ್ವತ ಪುನರ್ವಸತಿ ಯೋಜನೆಯನ್ನೂ ಸಿದ್ಧಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಂಗಳೂರು ನಗರ ಹೊರವಲಯದ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಸೆ.2ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಂಗ್ರ ಕೂಳೂರಿನ ಗುರುದ್ವಾರದಲ್ಲಿ ಟೆಂಟ್ ಹಾಕಿ ವಾಸಿಸುತ್ತಿದ್ದ 30ಕ್ಕೂ ಅಧಿಕ ಅಲೆಮಾರಿಗಳನ್ನು ರವಿವಾರ ಪೊಲೀಸರು ಎತ್ತಂಗಡಿ ಮಾಡಿದ್ದಾರೆ.