ರೈತರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹ; ಸೆ.12ರಂದು ವಿಧಾನ ಸೌಧಕ್ಕೆ ಮುತ್ತಿಗೆ: ಸುರೇಶ್ ಭಟ್

ವಿಧಾನ ಸೌಧ
ಪುತ್ತೂರು: ಮಣಪ್ಪುರಂ ಗೋಲ್ಡ್ ಮತ್ತು ಮುತ್ತೂಟ್ ಫೈನಾನ್ಸ್ ಕಂಪೆನಿಯ ತೆರವು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ. 12ರಂದು ನಡೆಯಲಿರುವ ವಿಧಾನಸಭಾ ಅಧಿವೇಶನದ ವೇಳೆಗೆ ವಾಸುದೇವ ಮೇಟಿ ನೇತೃತ್ವದ ರೈತ ಸಂಘ ಹಸಿರು ಸೇನೆಯ ವತಿಯಿಂದ ವಿಧಾನ ಸೌಧ ಮುತ್ತಿಗೆ ನಡೆಯಲಿದೆ ಎಂದು ರೈತ ಸಂಘ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಬಿ. ಸುರೇಶ್ ಭಟ್ ಕೊಜಂಬೆ ತಿಳಿಸಿದ್ದಾರೆ.
ಅವರು ಸೋಮವಾರ ಪುತ್ತೂರು ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಣಪ್ಪುರಂ ಗೋಲ್ಡ್ ಮತ್ತು ಮುತ್ತೂಟ್ ಫೈನಾನ್ಸ್ ಕಂಪೆನಿಗಳು ರಾಜ್ಯದ ರೈತರು, ಕೂಲಿ ಕಾರ್ಮಿಕರು ಮತ್ತು ಮದ್ಯಮ ವರ್ಗದ ಜನರನ್ನು ಸಾಲ ನೀಡಿ ದಿವಾಳಿ ಮಾಡುತ್ತಿದೆ. ಬಡವರು ಅಡವಿಟ್ಟ ಚಿನ್ನವನ್ನು ಕೇವಲ 3 ತಿಂಗಳಲ್ಲಿ ಹರಾಜು ಮಾಡುತ್ತಿದೆ. ಈ ಬಗ್ಗೆ ಈಗಾಗಲೇ 46 ಕೇಸುಗಳು ಜಿಲ್ಲೆಯಲ್ಲಿ ದಾಖಲಾಗಿದೆ. ಈ ಕಂಪೆನಿಯು 2.5 ಟನ್ ಗೋಲ್ಡ್ ಮಾರಾಟ ಮಾಡಲು ಕೇಂದ್ರ ಸರ್ಕಾರದ ಅನುಮತಿ ಕೋರಿದೆ. ಈ ಕಂಪೆನಿಯನ್ನು ತಕ್ಷಣವೇ ತೆರವು ಮಾಡಬೇಕು ಎಂಬುದು ಸಂಘದ ಆಗ್ರಹವಾಗಿದೆ.
ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲಿರುವ ಅಕ್ರಮ ಸಕ್ರಮ ಭೂಮಿ ಲೀಸ್ ವಿಧೇಯಕವನ್ನು ಹಿಂತೆಗೆದುಕೊಂಡು ಹಿಂದಿನಂತೆ ಭೂ ಒಡೆತನಕ್ಕೆ ನೀಡಬೇಕು. ಕೃಷಿ ರಹಿತ ಭೂಮಿಗಳನ್ನು ರಾಜಕೀಯ ಬೆಂಬಲಿಗರಿಗೆ ನೀಡುತ್ತಿರುವುದನ್ನು ಕೈಬಿಟ್ಟು ಪ್ರಾಮಾಣಿಕ ರೈತರಿಗೆ ಮಾತ್ರ ಹಕ್ಕುಪತ್ರ ನೀಡಬೇಕು. ಸರ್ಕಾರಕ್ಕೆ ಹಣ ಪಾವತಿಸಿ ಅರ್ಜಿ ಸಲ್ಲಿಸಿದ 30 ದಿನಗಳೊಳಗಾಗಿ ಫ್ಲಾಟಿಂಗ್ ಮಾಡಿಕೊಡಬೇಕು. ರೈತ ಪಂಪ್ ಸೆಟ್ಗಳಿಗೆ ಮೀಟರ್ ಅಳವಡಿಕೆಯನ್ನು ಕೈಬಿಡಬೇಕು. ಭೋಗಸ್ ಅಕ್ರಮ-ಸಕ್ರಮ ಮಂಜೂರಾತಿಯಲ್ಲಿ ಶಿಫಾರಸ್ಸು ಮಾಡಿದ ಅಧಿಕಾರಿಗಳನ್ನು ವಿಚಾರಣಾ ಹೊಣೆಗಾರರನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರೈತರು, ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನರು ಕಳೆದ 8 ವರ್ಷಗಳಿಂದ ದಿನದಿಂದ ದಿನಕ್ಕೆ ದಿವಾಳಿತನದತ್ತ ಸಾಗುತ್ತಿದ್ದಾರೆ. ಶೇ.85ರಷ್ಟು ಜನರ ಸಂಪತ್ತು ಶೇ 15ರಷ್ಟು ಮಂದಿ ಶ್ರೀಮಂತರ ಪಾಲಾಗುತ್ತಿದ್ದು, ಏಕ ಸ್ವಾಮ್ಯದ ಸಂಪತ್ತಿನ ಸಂಚಯನವಾಗುತ್ತಿದೆ. ಈಗಿನ ಸರ್ಕಾರದ ಆರ್ಥಿಕ ನೀಡಿ ಕೇವಲ ಶ್ರೀಮಂತರ ರಕ್ಷಣೆಗಷ್ಟೇ ಸೀಮಿತವಾಗಿದೆ. ಅಕ್ರಮ ಸಕ್ರಮದಲ್ಲಿ ದುಡ್ಡು ನೀಡಿ ಮಾಡಿಸಿಕೊಂಡಿರುವ ಶೇ.80ರಷ್ಟು ಮಂಜೂರಾತಿಗಳು ಕೂಡ ಅಕ್ರಮವೇ ಆಗಿದ್ದು, ಶಾಸಕರಿಂದ ಹಿಡಿದು ಗ್ರಾಮದ ಉಗ್ರಾಣಿ ತನಕವೂ ಇಂತಿಷ್ಟು ದುಡ್ಡು ನಿಗದಿಪಡಿಸಿಕೊಂಡು ಅಕ್ರಮ ಸಕ್ರಮ ಮಂಜೂರಾತಿ ಪ್ರಕ್ರಿಯೆಗಳು ನಡೆದಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ-ಹಸಿರುಸೇನೆಯ ಜಿಲ್ಲಾಧ್ಯಕ್ಷ ಅಮರನಾಥ ಆಳ್ವ ಕರ್ನೂರುಗುತ್ತು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕೊಪ್ಪಳ, ಸದಸ್ಯರಾದ ಗುರುಪ್ರಸಾದ್ ಮೆಣಸಿನಕಾನ ಮತ್ತು ನವೀನ್ಕುಮಾರ್ ಕುಕ್ಕುಡೇಲು ಉಪಸ್ಥಿತರಿದ್ದರು.