ಪುತ್ತೂರು: ಬಾಲವನದಲ್ಲಿ ಡಾ. ಶಿವರಾಮ ಕಾರಂತರ ಜನ್ಮದಿನೋತ್ಸವ
ಪುತ್ತೂರು: ಲೋಕವಿಶ್ವವಿದ್ಯಾನಿಲಯದಿಂದ ಅನುಭವ ಪಡೆದ ಡಾ.ಶಿವರಾಮ ಕಾರಂತರು ಅವರ ಪ್ರಯೋಗದ ಮೂಲಕ ನೆಲಮುಖಿಯಾಗಿ ತೋರಿಸಿದ ಮಹಾನ್ ಸಾಹಿತಿ ಎಂದು ಪ್ರಾಧ್ಯಾಪಕ, ಸಾಹಿತಿ ಡಾ. ನರೇಂದ್ರ ರೈ ದೇರ್ಲ ಹೇಳಿದರು.
ಅವರು ಸೋಮವಾರ ಪುತ್ತೂರು ಬಾಲವನದಲ್ಲಿ ಡಾ| ಶಿವರಾಮ ಕಾರಂತರ 121 ನೇ ಜನ್ಮದಿನೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾರಂತ ಸ್ಮರಣೆ ಮಾಡಿದರು.
ಮನುಷ್ಯ ವಿಕಸನದ ಮೂಲಸ್ಥಾಯಿ ಕಾಡು, ಮಣ್ಣು, ತುಂಡು ಭೂಮಿ ಎಂದು ತಿಳಿದು ಅದನ್ನು ತೋರಿಸಿಕೊಟ್ಟ ಕಾರಂತರು ಈ ವಿಚಾರದಲ್ಲಿ ರವೀಂದ್ರನಾಥ ಠಾಗೋರ್ ಹೆಗ್ಗೋಡು ಕೆ.ವಿ. ಸುಬ್ಬಣ್ಣರ ಸಮಾನರಾಗಿ ಕಾಣುತ್ತಾರೆ. ಕಾರಂತರನ್ನು ಬಾಲವನದ ಮೂಲಕ ಬಿತ್ತಿದ್ದೇವೆ. ಅವರು ಬಾಲವನದಲ್ಲಿ ಮಾಡಿದ ಸಮಾಜಮುಖಿ ಸಾಧನೆಗಳು ಸ್ಮರಣೆಗೆ ಬಂದು ನಮ್ಮನ್ನು ವಿನೀತಗೊಳಿಸುತ್ತವೆ ಎಂದು ದೇರ್ಲ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಡಾ. ಶಿವರಾಮ ಕಾರಂತರು ತಮ್ಮ ಸಾಧನೆಯ ಹಾದಿಯಲ್ಲಿ ಮುಟ್ಟದ ಕ್ಷೇತ್ರವಿಲ್ಲ. ಅವರ ಸಾಧನೆಯ ಹೆಮ್ಮೆಗೆ ಗರಿ ಎಂಬಂತೆ ರಾಜ್ಯ ಸರಕಾರ ಏಕಕಾಲದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನು ಜನ್ಮದಿನದಂದು ಹಮ್ಮಿಕೊಂಡಿದೆ ಎಂದರು.
ಕಾರಂತರ ಪುತ್ರಿ, ಒಡಿಸ್ಸಿ ನೃತ್ಯ ಕಲಾವಿದೆ ಕ್ಷಮಾ ರಾವ್ ಮಾತನಾಡಿ, ಬಾಲವನಕ್ಕೆ ಬರುವುದು ಭಾವಪೂರ್ಣ ಸನ್ನಿವೇಶ ಎಂದರು. ಡಾ. ಕಾರಂತರ ಸಾಧನೆಯ ಬೆನ್ನುಲುಬಾಗಿ ನಿಂತ ನನ್ನ ತಾಯಿ ಲೀಲಾ ಕಾರಂತರನ್ನು ನೆನಪಿಸಿಕೊಳ್ಳುವವರಿಲ್ಲ ಎಂದು ಅಭಿಪ್ರಾಯಿಸಿದ ಅವರು ಬಾಲವನದ ಜೀವವೈವಿಧ್ಯ, ಕಾಡು ಎಲ್ಲವೂ ಕಾರಂತರಿಗೆ ಅತ್ಯಂತ ಪ್ರಿಯವಾಗಿದ್ದು, ಇಲ್ಲಿ ಕಾಂಕ್ರೀಟ್ ನಿರ್ಮಾಣಗಳು ಬೇಡ ಎಂದು ವಿನಂತಿಸಿದರು.
ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಶುಭಹಾರೈಸಿದರು. ನಗರಸಭಾ ಸದಸ್ಯೆ ದೀಕ್ಷಾ ಪೈ, ತಹಶೀಲ್ದಾರ್ ನಿಸರ್ಗಪ್ರಿಯ, ಪುತ್ತೂರು ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ್, ನಗರಸಭಾ ಆಯುಕ್ತ ಮಧು ಎಸ್. ಮನೋಹರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೊಂಬೆಟ್ಟು ಸ.ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಪುತ್ತೂರು ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ಸ್ವಾಗತಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ಕಾರ್ಯಕ್ರಮ ನಿರ್ವಹಿಸಿದರು.
ವಿದುಷಿ ನಯನಾ ವಿ. ರೈ ಕುದ್ಕಾಡಿ ನಿರ್ದೇಶನದಲ್ಲಿ ವಿಶ್ವಕಲಾ ನಿಕೇತನದ ಸದಸ್ಯರಿಂದ ಭರತನಾಟ್ಯ ನಡೆಯಿತು. ಕಾರಂತರು ಮತ್ತು ರಂಗಭೂಮಿ ವಿಷಯದ ಕುರಿತು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್. ಜಿ. ಶ್ರೀಧರ್ ಅಧ್ಯಕ್ಷತೆಯಲ್ಲಿ ಮಂಗಳೂರು ಸ. ಪ್ರ. ದ. ಕಾಲೇಜಿನ ಪ್ರಾಧ್ಯಾಪಕ ಸುಬ್ಬಪ್ಪ ಕೈಕಂಬ ವಿಚಾರ ಮಂಡನೆ ಮಾಡಿದರು. ಚಂದ್ರಶೇಖರ ಸುಳ್ಳಪದವು ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಪಾಂಚಜನ್ಯ ಪ್ರಸಂಗದ ಯಕ್ಷಗಾನ ನಡೆಯಿತು. ಜಗನ್ನಾಥ ಅರಿಯಡ್ಕ ಹಾಗೂ ರಮೇಶ್ ಉಳಯ ಕಾರ್ಯಕ್ರಮಗಳನ್ನು ಸಂಯೋಜಿಸಿದರು.
ಈ ಸಂದರ್ಭದಲ್ಲಿ ಬಾಲವನದಲ್ಲಿರುವ ಡಾ. ಶಿವರಾಮ ಕಾರಂತರ ನಾಟ್ಯ ಶಾಲೆ ಪುನರ್ ಸ್ಥಾಪನೆಗೆ ಗುದ್ದಲಿ ಪೂಜೆಯನ್ನು ಶಾಸಕ ಸಂಜೀವ ಮಠಂದೂರು ನೆರವೇರಿಸಿದರು. ಸುಮಾರು ೩೦ ಲಕ್ಷ ವೆಚ್ಚದಲ್ಲಿ ನಾಟ್ಯ ಶಾಲೆ ಪುನರ್ ಸ್ಥಾಪನೆಗೊಳ್ಳಲಿದ್ದು, ೬ ತಿಂಗಳಲ್ಲಿ ಕೆಲಸಗಳು ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ. ಹಾಲಿ ಇರುವ ಆರ್ಟ್ ಗ್ಯಾಲರಿಯಲ್ಲಿ ಕಾರಂತರ ಸಾಕ್ಷ್ಯಚಿತ್ರ ಬಿತ್ತರಿಸುವ ಥಿಯೇಟರ್ ವ್ಯವಸ್ಥೆ ಮಾಡುವುದು, ಬಾಲವನ ರಸ್ತೆ ಅಭಿವೃದ್ಧಿ, ಕಾರಂತರ ಮೂಲ ಕೃತಿಗಳ ಗ್ರಂಥಾಲಯ ನಿರ್ಮಾಣ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.