ವಿಕಿರಣ, ರೇಡಿಯೊ ಐಸೊಟೋಪ್ಗಳು ಮಾನವ ಜೀವನದ ಅವಿಭಾಜ್ಯ ಅಂಗ: ಡಾ.ಎಂ.ವಿಜಯಕುಮಾರ್
ಕೊಣಾಜೆ: ವಿಕಿರಣ ಮತ್ತು ರೇಡಿಯೊ ಐಸೊಟೋಪ್ಗಳು ಮಾನವನ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಅವುಗಳಿಂದ ಸಮಾಜಕ್ಕೆ ಹಲವು ರೀತಿಯ ಪ್ರಯೋಜನಗಳಿರುವುದು ಸಂಶೋಧನೆಗಳಿಂದ ದೃಢಪಟ್ಟಿವೆ ಎಂದು ಯೆನೆಪೊಯ (ಪರಿಗಣಿತ ವಿವಿ) ಉಪಕುಲಪತಿ ಪ್ರೊ. ಎಂ ವಿಜಯಕುಮಾರ್ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸೋಮವಾರ, ಪರಿಸರ ವಿಕಿರಣಶೀಲತೆಯ ಮುಂದುವರಿದ ಸಂಶೋಧನಾ ಕೇಂದ್ರ (CARER), ವಿಕಿರಣ ಮತ್ತು ರೇಡಿಯೋ ಐಸೋಟೋಪ್ ತಂತ್ರಜ್ಞಾನದ ಅನ್ವಯ ಕೇಂದ್ರ (CARRT), ವಿಶ್ವವಿದ್ಯಾನಿಲಯ ಸಂಶೋಧನೆ ಮತ್ತು ವೈಜ್ಞಾನಿಕ ಉತ್ಕೃಷ್ಟತೆಯ ಪ್ರೋತ್ಸಾಹ (PURSE) ಕೇಂದ್ರಗಳು ಜಂಟಿಯಾಗಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ (DST) ಪ್ರಾಯೋಜಕತ್ವ ದೊಂದಿಗೆ ಆಯೋಜಿಸಲಾಗಿರುವ ಒಂದು ವಾರದ ʼವೈಜ್ಞಾನಿಕ ಮತ್ತು ತಾಂತ್ರಿಕ ಮೂಲಸೌಕರ್ಯ ಬಳಸಿ ಕೊಂಡು ಸಿನರ್ಜಿಸ್ಟಿಕ್ ತರಬೇತಿ ಕಾರ್ಯಕ್ರಮʼವನ್ನು (STUTI) ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿಪಡಿಸಿದ ವಿಕಿರಣ ತಂತ್ರಜ್ಞಾನದಿಂದ ಕ್ಯಾನ್ಸರ್ಗೆ ಅಂತಿಮ ಚಿಕಿತ್ಸೆ ಸಾಧ್ಯವಿದೆ ಎಂದರು.
ಇದೇ ವೇಳೆ ಅವರು, ಮಂಗಳೂರು ವಿಶ್ವವಿದ್ಯಾನಿಲಯ ಆರೋಗ್ಯ ರಕ್ಷಣೆ ಮತ್ತು ಉದ್ಯಮದಲ್ಲಿ ತರಬೇತಿ ಪಡೆದ ಮಾನವ ಸಂಪನ್ಮೂಲದ ಅಗತ್ಯವನ್ನು ಪೂರೈಸಲಿರುವ ವೈದ್ಯಕೀಯ ಭೌತಶಾಸ್ತ್ರ ಸ್ನಾತಕೋತ್ತರ ಪದವಿ ಆರಂಭಿಸಿರುವುದನ್ನು ಶ್ಲಾಘಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ. ಸುಬ್ರಹ್ಮಣ್ಯ ಯಡಪಾಡಿತ್ತಾಯ, ಮಂಗಳೂರು ವಿಶ್ವವಿದ್ಯಾನಿಲಯವು CARER, CARRT ಮತ್ತು DST-PURSE ನಂತಹ ಕೇಂದ್ರಗಳ ಮೂಲಕ ದೇಶದಲ್ಲಿ ಸಂಶೋಧನೆಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ, ಅಲ್ಲದೆ ಈ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಲು ಯೋಜನೆ ರೂಪಿಸಲಾಗಿದೆ ಎಂದರು.
CARER, CARRT ವೈದ್ಯಕೀಯ ಭೌತಶಾಸ್ತ್ರ ವಿಭಾಗದ ಸಂಯೋಜಕ ಪ್ರೊ.ಕರುಣಾಕರ ನರೇಗುಂಡಿ ಗಣ್ಯರನ್ನು ಸ್ವಾಗತಿಸಿದರು. ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಪ್ರೊ.ಕೆ.ಭಾಸ್ಕರ್ ಶೆಣೈ ವಂದಿಸಿದರು. ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ರಿಸರ್ಚ್ ರಿಜಿಸ್ಟ್ರಾರ್ ಡಾ.ಬಿ.ಮಂಜುನಾಥ, ಜೆಎಸ್ಎಸ್ ಎಹೆಚ್ಇಆರ್ ನಿರ್ದೇಶಕ (ಸಂಶೋಧನೆ) ಡಾ. ಪ್ರಶಾಂತ್ ವಿಶ್ವನಾಥ್, ಮಂಗಳೂರು ವಿವಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್ ಪ್ರೊ.ಮಂಜುನಾಥ ಪಟ್ಟಾಭಿ, DST- PRESE ಸಂಯೋಜಕಿ ಪ್ರೊ. ವಿಶಾಲಾಕ್ಷಿ ಬಿ, ಎನ್ಎಂಆರ್ ಇನ್ಸ್ಟ್ರುಮೆಂಟ್ ಸೆಂಟರ್ ನ ಪ್ರೊ. ಬೋಜ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಮೈಸೂರಿನ ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದೇಶದ ಪ್ರತಿಷ್ಠಿತ ಸಂಸ್ಥೆಗಳಿಂದ 50 ವಿಜ್ಞಾನಿಗಳನ್ನು ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ. ಅಣುಶಕ್ತಿ ಇಲಾಖೆಯ ವಿಜ್ಞಾನಿಗಳು ಸೇರಿದಂತೆ ಕ್ಷೇತ್ರದ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.