ಬೈಕಂಪಾಡಿ: ಕೋಟ್ಯಂತರ ರೂ. ಮೌಲ್ಯದ ಕಚ್ಚಾ ಸಾಮಗ್ರಿ ಕಳವು ಪ್ರಕರಣ; ನಾಲ್ವರು ಆರೋಪಿಗಳ ಸೆರೆ
ಮಂಗಳೂರು: ನಗರ ಹೊರವಲಯದ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಬ್ರೈಟ್ ಪ್ಯಾಕೇಜಿಂಗ್ ಪ್ರೈ.ಲಿ. ಕಂಪೆನಿಗೆ ಗುಜರಾತ್ನಿಂದ ಬರುತ್ತಿದ್ದ ಕೋಟ್ಯಂತರ ರೂ. ಮೌಲ್ಯದ ಪ್ಲಾಸ್ಟಿಕ್ ಕಚ್ಛಾ ಸಾಮಗ್ರಿ ಕಳವುಗೈದು ಮಾರಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಮತ್ತು ಪಣಂಬೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಮೂಲತಃ ಕಡಂದಲೆಯ ಪ್ರಸ್ತುತ ಬಿಜೈ ಕಾಪಿಕಾಡ್ನ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿರುವ ಮಹೇಶ್ ಕುಲಾಲ್ ಯಾನೆ ಮಹೇಶ್ ರಘು ಕುಲಾಲ್ (38), ಶಕ್ತಿನಗರ ಕ್ಯಾಸಲಿನ ಕಾಲನಿ ರಸ್ತೆಯ ಅನಂತ ಸಾಗರ (39), ಕಡಂದಲೆ ಗ್ರಾಮದ ಪಟ್ಲ ಹೌಸ್ನ ಸಾಯಿ ಪ್ರಸಾದ್ (35), ತಮಿಳುನಾಡಿನ ಕಿರಣ್ ಸಮಾನಿ (53) ಬಂಧಿತ ಆರೋಪಿಗಳು.
ಬೈಕಂಪಾಡಿಯ ಬ್ರೈಟ್ ಪ್ಯಾಕೆಜಿಂಗ್ ಪ್ರೈ.ಲಿ. ಕಂಪೆನಿಯಲ್ಲಿ ತಯಾರಿಸಲಾಗುವ ಉತ್ಪನ್ನಗಳಿಗೆ ಬೇಕಾದ ಸರಕುಗಳನ್ನು ಗುಜರಾತ್ನಿಂದ ತರಿಸಲಾಗುತ್ತಿದೆ. ಕಂಪನಿಗೆ ಲಾರಿಯಲ್ಲಿ ಬರುತ್ತಿದ್ದ ಕಚ್ಚಾ ಸರಕುಗಳನ್ನು ಕಂಪನಿಯಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ ಕುಲಾಲ್ ಎಂಬಾತನು ಕಂಪನಿಗೆ ಬಂದ ಕಚ್ಚಾ ಸರಕುಗಳನ್ನು ಕಂಪನಿಯಲ್ಲಿ ಸ್ವೀಕೃತಿಗೊಂಡಂತೆ ಪೋರ್ಜರಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಕಂಪನಿಗೆ ತಿಳಿಯದಂತೆ ಇತರೊಂದಿಗೆ ಸೇರಿಕೊಂಡು 2019ರ ಡಿಸೆಂಬರ್ನಿಂದ 2022ರ ಜನವರಿವರೆಗೆ ಕೋಟ್ಯಂತರ ಮೌಲ್ಯದ 36 ಟ್ರಕ್ಗಳಲ್ಲಿ ಬಂದ 840 ಟನ್ ಕಚ್ಚಾ ಸರಕುಗಳನ್ನು ಕಳವು ಮಾಡಿದ್ದ ಎಂದು ದೂರಲಾಗಿದೆ.
ಕಳವು ಮಾಡಿದ ಕಚ್ಚಾ ಸರಕುಗಳನ್ನು ಮಹೇಶ್ ಕುಲಾಲ್ ತನ್ನ ಸ್ನೇಹಿತ ಅನಂತ ಸಾಗರ ಎಂಬಾತನಿಗೆ ನೀಡುತ್ತಿದ್ದು, ಆತನು ಈ ಕಚ್ಚಾ ಸರಕುಗಳನ್ನು ತಾನು ಕೆಲಸ ಮಾಡುತ್ತಿರುವ ಬೈಕಂಪಾಡಿಯ ವಿಧಿ ಎಂಟರ್ ಪ್ರೈಸಸ್ನ ಹೆಸರಿನಲ್ಲಿ ನಕಲಿ ಬಿಲ್ಲುಗಳನ್ನು ಮಾಡಿ ಅದನ್ನು ಬೆಂಗಳೂರಿನ ಹೆಚ್ಎಸ್ ಪಾಲಿಮಾರ್ನ ಆರೋಪಿ ಕಿರಣ್ ಸಾಮಾನಿಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಪಣಂಬೂರು ಇನ್ಸ್ಪೆಕ್ಟರ್ ಸೋಮಶೇಖರ್ ನೇತೃತ್ವದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಮಹೇಶ್ ಕುಲಾಲ್ ಕಚ್ಚಾ ಸರಕುಗಳನ್ನು ಕಳವು ಮಾಡಿ ಮಾರಾಟ ಮಾಡಿದ ಹಣದಲ್ಲಿ ನಗರದ ವಿವಿಧ ಕಡೆಗಳಲ್ಲಿ ಜಮೀನು ಖರೀದಿಸಿದ್ದಾನೆ. ಅಲ್ಲದೆ ಕಾರುಗಳನ್ನು ಖರೀದಿಸಿ ಐಶಾರಾಮಿ ಜೀವನ ನಡೆಸುತ್ತಿದ್ದನು. ತನ್ನ ಪತ್ನಿಯ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಹಣ ಠೇವಣಿ ಇರಿಸಿ ಇನ್ಸೂರೆನ್ಸ್, ಶೇರು ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿದ್ದಾನೆ. ಪತ್ನಿಯ ಹೆಸರಿನಲ್ಲಿ ನಗರದ 3 ಕಡೆಗಳಲ್ಲಿ ಐಷಾರಾಮಿ ಸೆಲೂನ್ಗಳನ್ನು ಕೂಡ ಹೊಂದಿದ್ದಾನೆ. ಅನಂತ ಸಾಗರನು ಐಷಾರಾಮಿ ಕಾರು ಖರೀದಿಸಿ, ಮನೆಯನ್ನು ಕಟ್ಟಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ 6 ಮೊಬೈಲ್ ಪೋನ್ಗಳು, 4 ಲ್ಯಾಪ್ಟಾಪ್ಗಳು, 1 ಕಂಪ್ಯೂಟರ್, ಮಹೇಶ್ ಕುಲಾಲ್ನ ಹುಂಡೈ ಕಂಪೆನಿಯ 2 ಬೆಲೆಬಾಳುವ ಕಾರುಗಳು, ಅನಂತ ಸಾಗರ್ನಿಂದ ಕಿಯಾ ಕಂಪನಿಯ 1 ಕಾರು, ಟಾಟಾ ಕಂಪೆನಿಯ 1 ಲಾರಿಯನ್ನು ವಶಪಡಿಸಲಾಗಿದೆ. ಇವುಗಳ ಮೌಲ್ಯ ಸುಮಾರು 74 ಲಕ್ಷ ರೂ. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.