ಡಾ.ನಾ.ದಾಮೋದರ ಶೆಟ್ಟಿಯ ’ಅಶ್ವಥಾಮ’ ಕೃತಿ ಬಿಡುಗಡೆ
ಮಂಗಳೂರು, ಅ.21: ರಂಗಸಂಗಾತಿ ಮಂಗಳೂರು ಮತ್ತು ಸಿರಿವರ ಪ್ರಕಾಶನ ಬೆಂಗಳೂರು ಇದರ ಜಂಟಿ ಆಶ್ರಯದಲ್ಲಿ ಡಾ.ನಾ. ದಾಮೋದರ ಶೆಟ್ಟಿ ಅನುವಾದಿಸಿದ, ಮಲೆಯಾಳಂನ ಹಿರಿಯ ಲೇಖಕ ಮಾಡಾಂಬ್ ಕುಂಇಕುಟ್ಟನ್ ಅವರ ‘ಅಶ್ವಥಾಮ’ ನಾಟಕ ಕೃತಿಯು ನಗರದ ಕೆನರಾ ಕಾಲೇಜಿನಲ್ಲಿ ಶುಕ್ರವಾರ ಬಿಡುಗಡೆಗೊಂಡಿತು.
ಕೃತಿಯನ್ನು ಬಿಡುಗಡೆಗೊಳಿಸಿದ ಚಲನಚಿತ್ರ ನಿರ್ದೇಶಕ, ಕಥೆಗಾರ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ‘ನಾದಾ ಸದಾ ಚಟುವಟಿಕೆಯಲ್ಲಿರುವ ಕ್ರಿಯಾಶೀಲ ಸಾಹಿತಿ. ಅವರು ಅನುವಾದಕ್ಕೆ ತೆಗೆದುಕೊಳ್ಳುವ ಮಲಯಾಳಂನ ಕೃತಿಗಳಲ್ಲಿ ಸಾಕಷ್ಟು ಭಿನ್ನತೆ ಇದೆ. ಅಶ್ವಥಾಮ ಕಾದಂಬರಿಗಳಲ್ಲಿ ಬರುವ ಪಾತ್ರಗಳನ್ನು ಔನತ್ಯಕ್ಕೆ ಎತ್ತರಿಸಿದ್ದಾರೆ. ಪದಗಳ ನಡುವೆ ಇರುವ ಅರ್ಥಗಳನ್ನು ಬಿಂಬಿಸುವ ವಿಶಿಷ್ಟ ಕಾದಂಬರಿ ಇದಾಗಿದೆ’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಾಡಿನ ಹಿರಿಯ ಜನಪದ ವಿದ್ವಾಂಸ, ವಿಶ್ರಾಂತ ಕುಲಪತಿ, ಸಾಹಿತಿ ಡಾ.ಬಿ.ಎ.ವಿವೇಕ ರೈ ಮಾತನಾಡಿ ’ಪ್ರಸಕ್ತ ಕಾಲದಲ್ಲಿ ನಾವು ರಾಜಕೀಯ ತಲ್ಲಣಗಳ ಬಗ್ಗೆ ಕೇಳುತ್ತಲೇ ಇದ್ದೇವೆ. ಆದರೆ ಸಾಹಿತ್ಯಿಕವಾಗಿ ನಮ್ಮ ಇತಿಮಿತಿ, ತಿಳುವಳಿಕೆಯು ತುಂಬಾ ಕಡಿಮೆಯಾಗುತ್ತಿದೆ. ಅದರ ನಡುವೆ ಚಿಂತನಶೀಲ ಸಮಾಜಕ್ಕಾಗಿ ಇಂತಹ ಕಾದಂಬರಿಗಳು ಮತ್ತು ಅದರ ಓದು ಬಹಳ ಅವಶ್ಯಕವಾಗಿದೆ. ಅಶ್ವಥಾಮದ ಪಾತ್ರಗಳು ತುಂಬಾ ಭಿನ್ನವಾಗಿವೆ. ಈ ಕೃತಿಯಿಂದ ಕೇರಳದ ಸಂಸ್ಕೃತಿಯ ಪರಿಚಯ ನಮಗಾಗುತ್ತದೆ. ನಮ್ಮನ್ನು ನಾವು ಸ್ವತಃ ಮರುಪರುಶೀಲನೆ ಮಾಡಲು ಈ ಕೃತಿ ತುಂಬಾ ಸಹಕಾರಿಯಾಗಿದೆ’ ಎಂದರು.
’ಮಾಹಿತಿ ತಂತ್ರಜ್ಞಾನ ಮುಖ್ಯ. ಆದರೆ ಅದರಲ್ಲಿ ಮಾಹಿತಿ ಮಾತ್ರ ಸಿಗುತ್ತದೆ. ಜ್ಞಾನ ಸಿಗುವುದಿಲ್ಲ ಎಂಬ ಪ್ರಜ್ಞೆ ನಮಗೆ ಬೇಕು. ಅರಿವು ಅಥವಾ ತಿಳುವಳಿಕೆಗೆ ಕೇವಲ ಮೊಬೈಲ್ ಸಾಹಿತ್ಯ ಸಾಲದು. ಇಂತಹ ಕೃತಿಗಳ ಓದಿನಿಂದ ಮಾತ್ರ ಸಾಧ್ಯ.’ ಎಂದು ಡಾ.ಬಿ.ಎ.ವಿವೇಕ ರೈ ನುಡಿದರು.
ಕೃತಿಕಾರ, ಅನುವಾದಕ ನಾ.ದಾ.ಶೆಟ್ಟಿ ಮಾತನಾಡಿ ‘ಈ ಕೃತಿಯ ಅನುವಾದಕ್ಕೆ ಸುಮಾರು ಒಂದೂವರೆ ವರ್ಷ ತೆಗೆದುಕೊಂಡಿದ್ದೆ. ನನ್ನ ಪಾಲಿಗೆ ಇದೊಂದು ಅಪೂರ್ವ ಕೃತಿ’ ಎಂದು ಅಭಿಪ್ರಾಯಪಟ್ಟರು.
ಪ್ರಕಾಶಕ, ಸಿರಿವರ ಪ್ರಕಾಶನದ ರವೀಂದ್ರನಾಥ ಸಿರಿವರ ಮಾತನಾಡಿದರು. ನ್ಯಾಯವಾದಿ ಶಶಿರಾಜ್ ಕಾವೂರು ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ನರಸಿಂಹಮೂರ್ತಿ ವಂದಿಸಿದರು. ತೃಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.