ಮಂಗಳೂರು ಬಾಲಕ ಪ್ರಥಮ್ ಕಿಣಿ ಪಾರ್ಲಿಮೆಂಟ್ ಸಭಾಂಗಣದಲ್ಲಿ ಭಾಷಣ

ಮಂಗಳೂರು, ನ.3: ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ದಿಲ್ಲಿಯ ಪಾರ್ಲಿಮೆಂಟ್ ಸಭಾಂಗಣದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಬಗ್ಗೆ ಹಿಂದಿಯಲ್ಲಿ ಭಾಷಣ ಮಾಡುವ ಮೂಲಕ ಅಮೃತ ವಿದ್ಯಾಲಯದ ವಿದ್ಯಾರ್ಥಿ ಪ್ರಥಮ್ ಕಿಣಿ ಹೆಮ್ಮೆ ಮೂಡಿಸಿದ್ದಾರೆ.
ಸರ್ದಾದ್ ವಲ್ಲಭಬಾಯಿ ಪಟೇಲರ ಜನ್ಮ ದಿನಾಚರಣೆ ಅಂಗವಾಗಿ ಪಾರ್ಲಿಮೆಂಟ್ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ಅವಕಾಶ ಪ್ರಥಮ್ ಕಿಣಿಗೆ ಲಭ್ಯವಾಗಿತ್ತು. ಈ ಅವಕಾಶ ಪಡೆದ ಅತ್ಯಂತ ಕಿರಿಯವ ಪ್ರಥಮ್ ಆಗಿದ್ದು, ವಲ್ಲಭಬಾಯಿ ಪಟೇಲ್ ಬಗ್ಗೆ ತಾನು ಕಲೆಹಾಕಿದ ಮಾಹಿತಿಯನ್ನು ಕವಿತೆಯ ರೂಪದಲ್ಲಿ ಪ್ರಸ್ತುತ ಪಡಿಸುತ್ತಾ ಸುಮಾರು ಮೂರು ನಿಮಿಷಗಳ ಕಾಲ ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ ಎಂದು ಅಮೃತ ವಿದ್ಯಾಲಯದ ಪ್ರಾಂಶುಪಾಲೆ ಡಾ. ಆರತಿ ಎಚ್. ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಮೃತ ವಿದ್ಯಾಲಯದಲ್ಲಿ 6ನೆ ತರಗತಿಯಲ್ಲಿ ಕಲಿಯುತ್ತಿರುವ ಪ್ರಥಮ್ ಕಿಣಿ, ರಾಷ್ಟ್ರದಿಂದ ಆಯ್ಕೆಯಾದ 75 ವಿದ್ಯಾರ್ಥಿಗಳಲ್ಲಿ ಓರ್ವರಾಗಿದ್ದಾರೆ ಎಂದರು.
ಕಳೆದ ವರ್ಷ ಕೇಂದ್ರದ ರಕ್ಷಣಾ ಮತ್ತು ಶಿಕ್ಷಣ ಸಚಿವಾಲಯದಿಂದ ಆಯೋಜಿಸಲಾದ ವೀರ್ಗಾಥಾ ಸ್ಪರ್ಧೆಯಲ್ಲಿ ಪ್ರಥಮ್ ಸೂಪರ್ 25ರಲ್ಲಿ ಆಯ್ಕೆಯಾಗಿ ಪ್ರಬಂಧವನ್ನು ಮಂಡಿಸಿದ್ದರು. ಆ ಸ್ಪರ್ಧೆಯ ಮುಂದುವರಿದ ಭಾಗವಾಗಿ ಈ ವರ್ಷ ಪಾರ್ಲಿಮೆಂಟ್ನಲ್ಲಿ ಸರ್ದಾರ್ ವಲ್ಲಭಬಾಯಿ ಬಗ್ಗೆ ಮಾತನಾಡಲು ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು.
ತಾಯಿ ಹಾಗೂ ಶಾಲಾ ಶಿಕ್ಷಕರ ಪ್ರೇರಣೆ, ಪ್ರೋತ್ಸಾಹದ ಮೂಲಕ ಹಿಂದಿಯಲ್ಲಿ ನಿರರ್ಗಳವಾಗಿ ಸರ್ದಾರ್ ವಲ್ಲಭಬಾಯಿವರ ಸೇವೆ, ಸಾಧನೆಗಳನ್ನು ಪ್ರಸ್ತುತ ಪಡಿಸುವಲ್ಲಿ ಸಫಲರಾಗಿದ್ದಾರೆ ಎಂದು ಅಮೃತ ವಿದ್ಯಾಲಯದ ಯತೀಶ್ ಬೈಕಂಪಾಡಿ ಅಭಿಪ್ರಾಯಿಸಿದರು. ಗೋಷ್ಠಿಯಲ್ಲಿ ಪ್ರಥಮ್ ಪೋಷಕರಾದ ಸುನಿಲ್ ಕಿಣಿ, ಅಕ್ಷತಾ ಕಿಣಿ ಉಪಸ್ಥಿತರಿದ್ದರು.
ಯೋಧನಾಗುವ ಬಯಕೆ
ಅತ್ಯಂತ ಸ್ಫುಟವಾಗಿ ಹಾಗೂ ನಿರರ್ಗಳವಾಗಿ ಕನ್ನಡ, ಆಂಗ್ಲ ಹಾಗೂ ಹಿಂದಿಯಲ್ಲಿ ಮಾತನಾಡ ಬಲ್ಲ ಪ್ರಥಮ್ ಕಿಣಿ ತಾನು ಮುಂದೆ ಯೋಧನಾಗಬೇಕೆಂಬ ಬಯಕೆ ವ್ಯಕ್ತಪಡಿಸಿದರು. ದಿಲ್ಲಿ ಪಾರ್ಲಿಮೆಂಟ್ನಲ್ಲಿ ಭಾಷಣ ಮಾಡುವ ಉತ್ತಮ ಅವಕಾಶ ತನಗೆ ದೊರಕಿತ್ತು ಎಂದು ಅಭಿಪ್ರಾಯಿಸಿದರು.