ಹವಾಮಾನ ನಿಧಿ ತುರ್ತು ಹೆಚ್ಚಳಕ್ಕೆ ವಿಶ್ವಸಂಸ್ಥೆ ಕರೆ

ಪ್ಯಾರಿಸ್, ನ.3: ಹವಾಮಾನ ಬದಲಾವಣೆ ಪರಿಣಾಮಗಳು ದುರ್ಬಲ ರಾಷ್ಟ್ರಗಳನ್ನು ಜಾಗತಿಕ ತಾಪಮಾನಕ್ಕೆ ಹೊಂದಿಕೊಳ್ಳುವ ಪ್ರಯತ್ನಗಳಿಂದ ದೂರ ಇರಿಸುವ ಬೆದರಿಕೆ ಒಡ್ಡಿವೆ ಎಂದು ವಿಶ್ವಸಂಸ್ಥೆ(WHO) ಗುರುವಾರ ಎಚ್ಚರಿಸಿದ್ದು ಹವಾಮಾನ ನಿಧಿಗೆ ಅಂತರಾಷ್ಟ್ರೀಯ ಅನುದಾನದ ಪ್ರಮಾಣ ತುರ್ತು ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದೆ.
ಜಾಗತಿಕ ತಾಪಮಾನ ಏರಿಕೆಯನ್ನು ಪ್ರಚೋದಿಸುವ ಪಳೆಯುಳಿಕೆ ಇಂಧನ ಅನಿಲಗಳಿಗೆ ಕನಿಷ್ಟ ದೂಷಿಸಬೇಕಾದ ಹಲವು ಅಭಿವೃದ್ಧಿಶೀಲ ದೇಶಗಳು ಬರಗಾಲ, ಪ್ರವಾಹ, ಚಂಡಮಾರುತದಂತಹ ಹವಾಮಾನ ಪರಿಣಾಮಗಳಿಗೆ ಹೆಚ್ಚು ಒಡ್ಡಿಕೊಳ್ಳುತ್ತವೆ. ಹವಾಮಾನ ಪರಿಣಾಮಗಳನ್ನು ಎದುರಿಸಲು ಹಾಗೂ ಇಂಗಾಲ ಹೊರಸೂಸುವಿಕೆಯನ್ನು ನಿಗ್ರಹಿಸಲು ಈ ಆರ್ಥಿಕತೆಗಳಿಗೆ ಸಹಾಯ ಮಾಡುವುದು ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯ ಅತ್ಯಂತ ನಿರ್ಣಾಯಕ ವಿಷಯವಾಗಿದೆ.
ಜಾಗತಿಕ ತಾಪಮಾನ ನಿಯಂತ್ರಣ ಕ್ರಮಗಳನ್ನು ಅನುಸರಿಸಲು ಅಭಿವೃದ್ಧಿಶೀಲ ದೇಶಗಳಿಗೆ ಪ್ರತೀ ವರ್ಷ 100 ಶತಕೋಟಿ ಡಾಲರ್ ನೆರವು ಒದಗಿಸುವುದಾಗಿ ಘೋಷಿಸಿರುವ ಶ್ರೀಮಂತ ದೇಶಗಳು ಇದರ ಪಾಲನೆಗೆ ವಿಫಲವಾಗಿದ್ದು 2020ರಲ್ಲಿ ಕೇವಲ 83 ಶತಕೋಟಿ ಡಾಲರ್ ನೆರವು ಒದಗಿಸಿವೆ. ಇದರಲ್ಲಿ ಕೇವಲ 29 ಶತಕೋಟಿ ಡಾಲರ್ ಮಾತ್ರ ಹೊಂದಾಣಿಕೆ ನಿಧಿಗೆ ಸಂದಾಯವಾಗಿದ್ದು , 2020ರಲ್ಲಿ ಒದಗಿಸಿರುವ 5ರಿಂದ 10 ಪ್ರಮಾಣದಷ್ಟು ನಿಧಿಯ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮ(ಯುಎನ್‍ಇಪಿ)ಯ ಮುಖ್ಯಸ್ಥ ಇಂಗರ್ ಆಂಡರ್ಸನ್ ಹೇಳಿದ್ದಾರೆ.
ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ದುರ್ಬಲ ದೇಶಗಳಿಗೆ ನೆರವು ಒದಗಿಸಲು ಶ್ರೀಮಂತ ದೇಶಗಳು ಬದ್ಧವಾಗಿದ್ದರೂ, ಈ ದೇಶಗಳು ಮಾನವೀಯ ಸಹಾಯದಂತಹ ಇತರ ಅನುದಾನವನ್ನು ಹವಾಮಾನ ನಿಧಿಗೆ ಹೊಂದಿಕೆ ಮಾಡಿಕೊಳ್ಳುತ್ತಿವೆ. ಆದರೆ ಜಾಗತಿಕ ತಾಪಮಾನ ಹೆಚ್ಚುತ್ತಿದ್ದಂತೆಯೇ ಹವಾಮಾನ ಬದಲಾವಣೆಯ ಪರಿಣಾಮಗಳೂ ಹೆಚ್ಚಾಗುತ್ತವೆ ಮತ್ತು ಅದನ್ನು ಎದುರಿಸುವ ಕಾರ್ಯದ ವೆಚ್ಚವೂ ಹೆಚ್ಚುತ್ತಿದೆ ಎಂದು ಯುಎನ್‍ಇಪಿ ಅಧಿಕಾರಿ ಹೆನ್ರಿ ನ್ಯೂಫೆಲ್ಡ್ ಗುರುವಾರ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ದೇಶಗಳು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಪ್ರಯತ್ನಗಳನ್ನು ಬಲಪಡಿಸಲು 2030ರ ವೇಳೆಗೆ ವಾರ್ಷಿಕವಾಗಿ 160 ಶತಕೋಟಿ ಡಾಲರ್‍ನಿಂದ 340 ಶತಕೋಟಿ ಡಾಲರ್‍ನಷ್ಟು ಅನುದಾನದ ಅಗತ್ಯವಿದೆ ಎಂದು ಯುಎನ್‍ಇಪಿ ಪರಿಷ್ಕರಿಸಿದೆ. ತಾಪಮಾನವನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಶಿಯಸ್‍ಗೆ ಮಿತಿಗೊಳಿಸುವ ಪ್ಯಾರಿಸ್ ಒಪ್ಪಂದದ ಉದ್ದೇಶಕ್ಕಿಂತ ನಾವು ಬಹಳ ದೂರವಿದ್ದೇವೆ ಎಂದು ಕಳೆದ ವಾರ ವಿಶ್ವಸಂಸ್ಥೆ ಎಚ್ಚರಿಸಿದೆ.
ನಾವು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತ್ವರಿತವಾಗಿ ಕಡಿಮೆಗೊಳಿಸಬೇಕು ಮತ್ತು ನಿವ್ವಳ ಶೂನ್ಯ ಮಟ್ಟ ತಲುಪಲು ಶ್ರಮಿಸಬೇಕು. ಆದರೆ ಜನತೆ, ಪರಿಸರ ವ್ಯವಸ್ಥೆ ಮತ್ತು ಆರ್ಥಿಕತೆ ಈಗಾಗಲೇ ಬಳಲುತ್ತಿದೆ. ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಪ್ರಯತ್ನಗಳನ್ನು ತುರ್ತಾಗಿ ಹೆಚ್ಚಿಸುವತ್ತ ಅಂತರಾಷ್ಟ್ರೀಯ ಸಮುದಾಯ ಆದ್ಯತೆ ನೀಡಬೇಕು ಎಂದು ಆಂಡರ್ಸನ್ ಹೇಳಿದ್ದಾರೆ.
ಅತ್ಯಂತ ಬಡವರು ಹೆಚ್ಚಾಗಿ ಕಷ್ಟಪಡುತ್ತಾರೆ ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಡಿಮೆ ಶಕ್ತರಾಗುತ್ತಾರೆ. ಇದು ಸ್ವೀಕಾರಾರ್ಹವಲ್ಲ . ಹವಾಮಾನ ಬದಲಾವಣೆ ಸಮಸ್ಯೆಯಿಂದ ಲಕ್ಷಾಂತರ ಜೀವಗಳನ್ನು ಉಳಿಸಲು ಜಾಗತಿಕ ಅನುದಾನದಲ್ಲಿ ಹೆಚ್ಚಳದ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ.