ಆಟೋ ರಿಕ್ಷಾದಲ್ಲಿ ಸ್ಫೋಟ: ಇನ್ನೆರೆಡು ದಿನಗಳಲ್ಲಿ ಪ್ರಕರಣ NIAಗೆ ಹಸ್ತಾಂತರಿಸಲು ಕ್ರಮ: ಆರಗ ಜ್ಞಾನೇಂದ್ರ

ಮಂಗಳೂರು, ನ. 23: ನಗರದ ನಾಗುರಿ ಬಳಿ ಸಂಭವಿಸಿದ್ದ ಆಟೋ ರಿಕ್ಷಾದಲ್ಲಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸ್ ತನಿಖೆಯ ಜತೆ ಎನ್ಐಎ ಸೇರಿದಂತೆ ಕೇಂದ್ರ ತನಿಖಾ ತಂಡಗಳು ಸಹಕರಿಸುತ್ತಿವೆ. ಪ್ರಕರಣವನ್ನು ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ಎನ್ಐಗೆ ಹಸ್ತಾಂತರಿಸುವ ಬಗ್ಗೆ ನಿರ್ಣಯವಾಗಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಸ್ಪೋಟ ಪ್ರಕರಣದ ಸ್ಥಳ, ಸಂತ್ರಸ್ತ ಹಾಗೂ ಆರೋಪಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.
ಪ್ರಕರಣದ ಸಂತ್ರಸ್ತ ಹಾಗೂ ಆಟೋ ಚಾಲಕ ಹಾಗೂ ಆರೋಪಿ ಶಾರೀಕ್ ನ ಆರೋಗ್ಯ ಸುಧಾರಣೆಗೆ 8 ಮಂದಿ ತಜ್ಞ ವೈದ್ಯರ ಮೂಲಕ ಚಿಕಿತ್ಸೆ ಒದಗಿಸಲಾಗುತ್ತಿದೆ. ಆರೋಪಿ ಗುಣಮುಖನಾದ ಮೇಲೆ ಹೆಚ್ಚಿನ ವಿಚಾರಣೆ ನಡೆಯಲಿದೆ. ಗಾಯಾಳು ರಿಕ್ಷಾ ಚಾಲಕರ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರಕಾರವೇ ಭರಿಸಲಿದೆ. ಅವರಿಗೆ ಸೂಕ್ತ ಆರ್ಥಿಕ ಪರಿಹಾರ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಜತೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವರು ಹೇಳಿದರು.
ಭಯಾನಕ ಘಟನೆಯೊಂದು ತಪ್ಪಿದೆ. ಆಕಸ್ಮಿಕವಾಗಿ ಆ ಜಾಗದಲ್ಲಿ ಸ್ಫೋಟ ಆಗಿದ್ದರಿಂದ ಬೆಂಕಿ ಮಾತ್ರ ಉಗುಳಿದೆ. ಬೇರೆಡೆ ಸಮರ್ಪಕ ರೀತಿಯಲ್ಲಿ ಸ್ಫೋಟ ಆಗಿದ್ದರೆ ಸಾಕಷ್ಟು ಭಯಾನಕ ಪರಿಸ್ಥಿತಿ ಉಂಟಾಗುತ್ತಿತ್ತು. ಭಯೋತ್ಪಾದನಾ ಕೃತ್ಯ ನಿರ್ಮೂಲನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗಮನ ಹರಿಸಿದೆ. ಹಿಂದೆಲ್ಲಾ ಅಲ್ಲಲ್ಲಿ ನಡೆಯುತ್ತಿದ್ದ ಬಾಂಬ್ ಸ್ಫೋಟ ಪ್ರಕರಣಗಳು ಇತ್ತೀಚೆಗೆ ಕಡಿಮೆಯಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಶಾರೀಕ್ ತೀರ್ಥಹಳ್ಳಿಯವನಾಗಿದ್ದು, ಬೆಂಗಳೂರು, ಕನ್ಯಾಕುಮಾರಿ ಸೇರಿ ದೇಶದ ಹಲವೆಡೆ ಸುತ್ತಾಡಿದ್ದಾನೆ. ಈ ಸಂಬಂಧ ಪೊಲೀಸರು ಅನೇಕ ಸಾಕ್ಷ್ಯ ಕಲೆ ಹಾಕಿದ್ದಾರೆ. ಫಾರೆನ್ಸಿಕ್ ತಜ್ಞರು ಕೂಡ ಅನೇಕ ದಾಖಲೆ ಕಲೆ ಹಾಕಿದ್ದಾರೆ. ಆರೋಪಿಯ ಹಿನ್ನೆಲೆ, ಆತನಿಗೆ ಹಣಕಾಸಿನ ನೆರವು, ಆತನ ಹಿಂದೆಯಾರಿದ್ದಾರೆ ಎಂಬ ಎಲ್ಲಾ ನೆಲೆಯಲ್ಲೂ ಹಾಗೂ ಆರೋಪಿಗೆ ಸೂಕ್ತ ಶಿಕ್ಷೆ ಆಗೋ ನಿಟ್ಟಿನಲ್ಲಿ ಎಲ್ಲಾ ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದರು.
ಆರೋಪಿಗಳು ಸ್ಥಳೀಯವಾಗಿ ಸಿಗೋ ವಸ್ತುಗಳನ್ನು ಜೋಡಿಸಿ ಬಾಂಬ್ ತಯಾರಿಸೋದ್ರಲ್ಲಿ ಪರಿಣಿತರು. ಈ ಎಲ್ಲಾ ಆಯಾಮದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಕ್ತ ಹರಿಸಿ ಪ್ರಾಣ ತೆಗೆಯಲು ಹೊರಟಿರೋ ಮತಾಂಧ ಶಕ್ತಿಗಳನ್ನು ನಾವು ಮಟ್ಟ ಹಾಕಲಿದ್ದೇವೆ. ಕೇಂದ್ರದ ತನಿಖಾ ಸಂಸ್ಥೆಗಳು ಕೂಡ ತನಿಖೆಯಲ್ಲಿ ಆರಂಭದಿಂದಲೂ ಜತೆಯಲ್ಲಿದ್ದಾರೆ. ಇದರ ಹಿಂದೆ ಇರೋ ಎಲ್ಲಾ ಶಕ್ತಿಗಳನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಈ ಸಂದರ್ಭ ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಡಿಜಿಪಿ ಪ್ರವೀಣ್ ಸೂದ್, ಐಜಿಪಿ ಚಂದ್ರಗುಪ್ತ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು.
ಎನ್ಐಎ ಘಟಕ ಸ್ಥಾಪನೆಗೆ ಕೇಂದ್ರದಿಂದ ಧನಾತ್ಮಕ ಪ್ರತಿಕ್ರಿಯೆ
ಮಂಗಳೂರಿನಲ್ಲಿ ಎನ್ಐಎ ಘಟಕ ಸ್ಥಾಪಿಸಬೇಕೆಂಬ ಬೇಡಿಕೆ ಬಗ್ಗೆ ಈಗಾಗಲೆ ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ. ಸರಕಾರ ಧನಾತ್ಮಕವಾಗಿ ಪ್ರತಿಕ್ರಿಯಿಸಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು.
ನಕಲಿ ಐಡಿಯೊಂದಿಗೆ ಓಡಾಟ
ತೀರ್ಥಹಳ್ಳಿ ಒಂದು ಸುಸಂಸ್ಕೃತ ತಾಲೂಕು. ನಾಡಿಗೆ ಸಾಹಿತಿ, ರಾಜಕಾರಣಿಗಳನ್ನು ನೀಡಿದ ತಾಲೂಕು. ಆದರೆ ಇಂಥವರೂ ಇದಾರೆ. ಈ ಇವರಿಗೆ ಮತಾಂಧ ಸಂಘಟನೆ ಲಿಂಕ್ ಇದೆ. ಕರಾವಳಿ ಮತ್ತು ಕೇರಳದ ಲಿಂಕ್ ಇದೆ. ಈ ಪ್ರಕರಣದ ಆರೋಪಿ ಮಧುರೈ, ನಾಗರಕೋಯಿಲ್, ತಮಿಳುನಾಡು ಎಲ್ಲಾ ಕಡೆ ಪ್ರವಾಸ ಮಾಡಿದ್ದಾನೆ. ಗೋಡೆ ಬರಹ ಪ್ರಕರಣದಲ್ಲೂ ಈತ ಬಂಧಿಸಲ್ಪಟ್ಟಿದ್ದ. ಯುಎಪಿಎ ಕಾಯ್ದೆ ದಾಖಲಾಗಿತ್ತು. ಹಾಗಾಗಿ ಇಲಾಖೆಯಿಂದ ಕಣ್ಣಿಡುವ ಪ್ರಯತ್ನ ಆಗಿತ್ತಾದರೂ ಇದಕ್ಕಿದ್ದಂತೆ ತಲೆ ಮರೆಸಿಕೊಂಡಿದ್ದ. ಇವರು ಫೋನ್ ಮೂಲಕ ಸಂಪರ್ಕ ಸಾಧಿಸುತ್ತಿರಲಿಲ್ಲ. ಬೇರೆ ರೀತಿಯ ಸಂಪರ್ಕ ವ್ಯವಸ್ಥೆ ಹೊಂದಿದ್ದರು. ವಿಚಿತ್ರವೆಂದರೆ ಆರೋಪಿ ಹಿಂದೂ ಹೆಸರು ಇಟ್ಟುಕೊಂಡು ನಕಲಿ ಐಡಿ ಮಾಡಿಕೊಡು ಓಡಾಡುತ್ತಿದ್ದ ಕಾರಣ ಶಂಕೆ ಪಡುವಂತಿರಲಿಲ್ಲ. ಮಾತ್ರವಲ್ಲದೆ ಪದೇ ಪದೇ ವಾಸಸ್ಥಾನ ಬದಲಾಯಿಸಿಕೊಳ್ಳುತ್ತಿದ್ದ. ಈ ಹಿಂದಿನ ಪ್ರಕರಣದಲ್ಲಿ ಹೈಕೋರ್ಟ್ನಿಂದ ಜಾಮೀನು ದೊರಕಿತ್ತು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.