ಆರೋಗ್ಯ ಸೇವೆ ಅಂಗೈಯಲ್ಲಿ ಪರಿಕಲ್ಪನೆಯಡಿ ನಮ್ಮ ಕ್ಲಿನಿಕ್ ಆರಂಭ: ಡಾ. ಕುಮಾರ್
ಮಂಗಳೂರು: ‘ನಮ್ಮ ಕ್ಲಿನಿಕ್’ ಉದ್ಘಾಟನೆ

ಮಂಗಳೂರು, ಡಿ.14: ಬದುಕಿನ ಜೊತೆ ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯ ಬೇರೊಂದಿಲ್ಲ. ಆರೋಗ್ಯ ಸೇವೆ ಅಂಗೈಯಲ್ಲಿ ಸಿಗಬೇಕು ಎಂಬ ಉದ್ದೇಶಕ್ಕೆ ರಾಜ್ಯ ಸರಕಾರದ ನಮ್ಮ ಕ್ಲಿನಿಕ್ ಆರಂಭಿಸಿದ್ದು, ಇದರ ಸದುಪಯೋಗವಾಗಬೇಕು ಎಂದು ದ.ಕ.ಜಿ.ಪಂ. ಸಿಇಒ ಡಾ. ಕುಮಾರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಸೂಟರ್ ಪೇಟೆಯಲ್ಲಿ ಬುಧವಾರ ನಡೆದ ‘ನಮ್ಮ ಕ್ಲಿನಿಕ್’ ಜಿಲ್ಲಾ ಮಟ್ಟದ ಉದ್ಘಾಟನೆ ನೆರವೇರಿಸಿ ಅವುರ ಮಾತನಾಡಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸಮುದಾಯ ಆರೋಗ್ಯ ಅಧಿಕಾರಿಗಳು ಮನೆ ಮನೆ ಭೇಟಿಗೆ ತೆರಳುತ್ತಿದ್ದಾರೆ. ಈಗಾಗಲೇ ಶೇ.70ರಷ್ಟು ಮಂದಿಗೆ ಸ್ಕ್ರೀನಿಂಗ್ ಮಾಡಲಾಗಿದೆ. 368 ಮಂದಿ ಸಮುದಾಯ ಆರೋಗ್ಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಸದ್ಯದಲ್ಲೂ ನಗರ ಭಾಗಕ್ಕೂ ನೇಮಕ ಮಾಡಲಾಗುವುದು. ಸುಸ್ಥಿರ ಅಭಿವೃದ್ಧಿಯ ಮೂರು ಗುರಿಗಳಲ್ಲಿ ಆರೋಗ್ಯ ಕ್ಷೇತ್ರವೂ ಒಂದಾಗಿದೆ ಎಂದು ಅವರು ಹೇಳಿದರು.
ಮೇಯರ್ ಜಯಾನಂದ ಅಂಚನ್ ಮಾತನಾಡಿ, ಆರೋಗ್ಯ ಕ್ಷೇತ್ರದ ಬಲವರ್ದನೆಗಾಗಿ ನಮ್ಮ ಕ್ಲಿನಿಕ್ ಆರಂಭಗೊಂಡಿದೆ. ಆರೋಗ್ಯ ಕ್ಷೇತ್ರವನ್ನು ತಳಮಟ್ಟದಿಂದ ಬಲಪಡಿಸುವ ಮತ್ತು ಸುಧಾರಣೆ ತರುವ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳ ಮೂಲಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಯಲ್ಲಿ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡಲು ಇದು ಸಹಕಾರಿಯಾಗಲಿದೆ ಎಂದರು.
ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮಾತನಾಡಿ, ಬಡ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್ ಆರಂಭಗೊಂಡಿದೆ. ಇದು ಆರೋಗ್ಯ ಕ್ಷೇತ್ರದ ಬದಲಾವಣೆಯ ದೃಷ್ಟಿಯಿಂದ ರಾಜ್ಯ ಸರಕಾರದ ಹೊಸ ಪರಿಕಲ್ಪನೆಯಾಗಿದೆ ಎಂದರು.
ದ..ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಉಪ ಮೇಯರ್ ಪೂರ್ಣಿಮ, ಮನಪಾ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಹೇಮಲತಾ ರಘು ಸಾಲ್ಯಾನ್, ಭರತ್ ಕುಮಾರ್, ಶೈಲೇಶ್ ಶೆಟ್ಟಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮನಪಾ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಭಂಡಾರಿ, ಉದ್ಯಮಿ ಅಬ್ದುಲ್ ಹಮೀದ್ ಸೇರಿದಂತೆ ಪಾಲಿಕೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಮತ್ತಿತರರು ಇದ್ದರು.ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.
ನಮ್ಮ ಕ್ಲಿನಿಕ್ನಲ್ಲಿ ವಿವಿಧ ಸೌಲಭ್ಯಗಳು ಲಭ್ಯದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಮಾತನಾಡಿ, ನಮ್ಮ ಕ್ಲಿನಿಕ್ನಲ್ಲಿ ವಿವಿಧ ಆರೋಗ್ಯ ಸೇವೆಗಳು ಲಭ್ಯ ಎಂದರು.ಗರ್ಭಿಣಿ ಆರೈಕೆ ಹಾಗೂ ಬಾಣಂತಿ ಸೇವೆ, ನವಜಾತ ಶಿಶು ಆರೈಕೆ ಹಾಗೂ ಚುಚ್ಚುಮದ್ದು ಸೇವೆ, ಮಕ್ಕಳ ಹಾಗೂ ಹದಿಹರೆಯದವರಿಗೆ ನೀಡುವ ಆರೋಗ್ಯ ಸೇವೆ, ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಠಾನ, ಎಲ್ಲಾ ರಾಷ್ಟ್ರೀಯ ಆರೋಗ್ಯ ಸೇವೆಗಳ ಅನುಷ್ಠಾನ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಅಸಾಂಕ್ರಾಮಿಕ ರೋಗಗಳ ನಿರ್ವಹಣೆ, ಹಿರಿಯ ನಾಗರಿಕರ ಆರೈಕೆ ಹಾಗೂ ಉಪಶಾಮಕ ಆರೈಕೆ, ಕಣ್ಣಿನ, ದಂತ ಆರೋಗ್ಯ ಸೇವೆಗಳ ಅನುಷ್ಠಾನ, ತುರ್ತು ವೈದ್ಯಕೀಯ ಸೇವೆ, ಮಾನಸಿಕ ಆರೋಗ್ಯ ಸೇವೆ, ಉಚಿತ ಔಷಧಿ, ಉಚಿತ ಸಾಮಾನ್ಯ ಪ್ರಯೋಗಶಾಲಾ ಪರೀಕ್ಷೆ ಸೌಲಭ್ಯಗಳು ಇರಲಿದೆ. ಕ್ಲಿನಿಕ್ನಲ್ಲಿ ಎಂಬಿಬಿಎಸ್ ವೈದ್ಯರು, ಶುಶ್ರೂಷಕಿ ಪ್ರಯೋಗಶಾಲಾ ತಂತ್ರಜ್ಞರು, ಗ್ರೂಪ್ ಡಿ ನೌಕರ ಇರಲಿದ್ದಾರೆ ಎಂದು ಅವರು ಹೇಳಿದರು.