ಸಾಂಸ್ಕೃತಿಕ ‘ಜಾಂಬೂರಿ’ಗೆ ದೇಣಿಗೆ ನೀಡಲು ಸಂಸದ ನಳಿನ್ ಕರೆ

ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಕೀರ್ಣದ ಆವರಣದಲ್ಲಿ ಡಿ.21ರಿಂದ 27ರವರೆಗೆ ನಡೆಯಲಿರುವ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಜಿಲ್ಲೆಯ ಎಲ್ಲಾ ಸರಕಾರಿ, ಸರಕಾರೇತರ ಉದ್ದಿಮೆಗಳು, ಕೈಗಾರಿಕೆಗಳು, ವಿವಿಧ ಸಂಸ್ಥೆಗಳು ಉದಾರ ಮನಸ್ಸಿನಿಂದ ಧನ ಸಹಾಯ ಮಾಡುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಸೋಮವಾರ ಈ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕೋವಿಡ್, ಪ್ರವಾಹ ಸೇರಿದಂತೆ ಹಲವಾರು ಸಂಕಷ್ಟದ ಸಮಯದಲ್ಲಿ ಜಿಲ್ಲೆಯ ಸರಕಾರಿ, ಸರಕಾರೇತರ ಉದ್ದಿಮೆಗಳು ಹಾಗೂ ವಿವಿಧ ಸಂಸ್ಥೆಗಳು ಜಿಲ್ಲಾಡಳಿತಕ್ಕೆ ಸಹಾಯ ಹಸ್ತ ಚಾಚಿವೆ. ಇದೇ ಪ್ರಪ್ರಥಮ ಬಾರಿಗೆ ದೇಶದಲ್ಲಿ ಆಯೋಜಿಸಲಾಗಿರುವ ಈ ಸಾಂಸ್ಕೃತಿಕ ಜಾಂಬೂರಿಗೆ 40 ಕೋ.ರೂ.ವೆಚ್ಚವಾಗುವ ಸಾಧ್ಯತೆಯಿದೆ. ರಾಜ್ಯ ಸರಕಾರವು 10 ಕೋ.ರೂ. ಅನುದಾನ ಬಿಡುಗಡೆ ಮಾಡಿದೆ. ಅದನ್ನು ಹೊರತುಪಡಿಸಿದಂತೆ ಜಿಲ್ಲೆಯಲ್ಲಿರುವ ಕೈಗಾರಿಕೆಗಳು, ಕಾರ್ಖಾನೆಗಳು, ಉದ್ದಿಮೆಗಳು ಹಾಗೂ ಹಲವಾರು ಸಂಸ್ಥೆಗಳು ಸಿಎಸ್‌ಆರ್ ನಿಧಿಯಿಂದ ಧನಸಹಾಯ ಮಾಡುವಂತೆ ಮನವಿ ಮಾಡಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಡಾ. ವಿವೇಕ್ ಆಳ್ವಾ ಮಾತನಾಡಿ, ಸರಕಾರದಿಂದ 10 ಕೋ.ರೂ.ಹಾಗೂ ವಿದ್ಯಾರ್ಥಿಗಳ ನೋಂದಣಿಯಿಂದ 6 ಕೋ.ರೂ. ಸಂಗ್ರಹವಾಗಿದೆ. ಉಟೋಪಚಾರಕ್ಕೆ 11 ಕೋ.ರೂ. ಖರ್ಚಾಗುವ ಸಾಧ್ಯತೆಯಿದೆ. ಜಿಲ್ಲೆಯ ಎಲ್ಲಾ ಕಂಪನಿಗಳು, ಕೈಗಾರಿಕೆಗಳು, ಉದ್ಯಮಿಗಳು ಹಾಗೂ ವಿವಿಧ ಸಂಸ್ಥೆಗಳು ಉದಾರ ಮನಸ್ಸಿನಿಂದ ನೆರವು ನೀಡಿ ಸಹಕರಿಸಬೇಕು ಎಂದರು.
ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಮಾತನಾಡಿ ಅಂತರಾಷ್ಟ್ರೀಯ ಜಾಂಬೂರಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಆಹಾರ ಮೇಳ, ಪುಸ್ತಕ ಮೇಳ, ಕೃಷಿ ಮೇಳ ಸಹಿತ ವಿವಿಧ ಮೇಳಗಳ ಸಿದ್ಧತೆಗಳು ಅಂತಿಮ ಹಂತದಲ್ಲಿದೆ. 50,000 ಮಕ್ಕಳು ಸಾಂಸ್ಕೃತಿಕ ಜಾಂಬೂರಿಯಲ್ಲಿ ಭಾಗವಹಿಸಲಿದ್ದು ಅವರಿಗೆ ವಸತಿ, ಊಟೋಪಚಾರದ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತಿದೆ, ಪ್ರತಿದಿನ ಅವರೊಂದಿಗೆ 50 ಸಾವಿರ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ವೇದಿಕೆಯಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ದ.ಕ.ಜಿಪಂ ಸಿಇಒ ಡಾ.ಕುಮಾರ್, ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶುಕುಮಾರ್ ಉಪಸ್ಥಿತರಿದ್ದರು.
ಮೂಡುಬಿದರೆಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಜಾಂಬೂರಿಗೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲಾ ಗ್ರಾಪಂಗಳಿಂದ ಸಂಗ್ರಹಿಸಿದ ದೇಣಿಗೆ ಮೊತ್ತ 15 ಲಕ್ಷ ರೂ.ವನ್ನು ಸೋಮವಾರ ದ.ಕ.ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ದ.ಕ.ಜಿಪಂ ಸಿಇಒ ಡಾ. ಕುಮಾರ್ ಅವರು ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಡಾ. ವಿವೇಕ್ ಆಳ್ವಾ ಅವರಿಗೆ ಹಸ್ತಾಂತರಿಸಿದರು.
