ಬೆಳ್ತಂಗಡಿ | ಬಾಲಕಿಯ ಅತ್ಯಾಚಾರ ಆರೋಪ; ನಾಲ್ವರ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಆಕೆ ಗರ್ಭವತಿಯಾದ ಬಳಿಕ ಗರ್ಭಪಾತ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೊಪ್ಪದ ಗಂಡಿ ಪರಿಸರದಿಂದ ವರದಿಯಾಗಿದೆ.
ಬಾಲಕಿಯು ತನ್ನ ಮನೆ ಸಮೀಪದ ಸುಧೀರ್ ಎಂಬವನ ಮನೆಗೆ ರವಿವಾರ ಹಾಗೂ ಇತರ ರಜಾ ದಿನಗಳಲ್ಲಿ ಟಿವಿ ವೀಕ್ಷಣೆಗೆಂದು ಹೋಗುತ್ತಿದ್ದು, ಈ ಸಮಯ ಆರೊಪಿ ಸುಧೀರ್ ಸಮೀಪದಲ್ಲಿರುವ ಆತನ ಅಜ್ಜಿ ಮನೆಗೆ ಬಾಲಕಿಯನ್ನು ಕರೆದುಕೊಂಡು ಹೋಗಿ ಬೆದರಿಸಿ ಅತ್ಯಾಚಾರ ನಡೆಸುತ್ತಿದ್ದ. ಅಲ್ಲದೆ ಈ ಕೃತ್ಯವನ್ನು ಕಳೆದ ಒಂದು ವರ್ಷದಿಂದ ಮುಂದುವರಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಇದರಿಂದ ಬಾಲಕಿಯು ಗರ್ಭವತಿಯಾಗಿದ್ದು, ಪಾರ್ವತಿ, ಮನೋಹರ ಹಾಗೂ ಮಾದುಮಾಮ ಎಂಬವರ ಜತೆ ಸೇರಿ ಆಸ್ಪತ್ರೆಯೊಂದರಲ್ಲಿ ಸುಧೀರ್ ಗರ್ಭಪಾತ ಮಾಡಿಸಿದ್ದಾನೆನ್ನಲಾಗಿದೆ.
ಈ ವಿಚಾರವಾಗಿ ಡಿ. 30ರಂದು ಚೈಲ್ಡ್ ಲೈನ್ ನಿಂದ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ಬಂದಿದ್ದು, ಇದನ್ನು ಖಚಿತಪಡಿಸಲು ಸಿಡಿಪಿಒ ಕಚೇರಿ ಅಧಿಕಾರಿಗಳೊಂದಿಗೆ ಮಹಿಳಾ ಪೋಲೀಸ್ ಸಿಬ್ಬಂದಿ ಮಾಹಿತಿ ಪಡೆಯಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ ಎಂದು ತಿಳಿದು ಬಂದಿದೆ.
ಮಕ್ಕಳ ಕಲ್ಯಾಣ ಸಮಿತಿ ಆದೇಶದ ಮೇರೆಗೆ ಮೂಡುಬಿದ್ರೆಯ ಪ್ರಜ್ಞಾ ನಿರ್ಗತಿಕ ಮಕ್ಕಳ ಕುಟೀರದಲ್ಲಿ ಆಪ್ತ ಸಮಾಲೋಚನೆ ನಡೆಸಿ ಬಳಿಕ ಬಾಲಕಿಯಿಂದ ಬಂದ ಮಾಹಿತಿಯಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಉಡುಪಿ| ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ಆರೋಪ; ಇಬ್ಬರ ಬಂಧನ