ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ: ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.
ಉರುವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾ ಡುತ್ತಿದ್ದರು.
2023ರ ಜನವರಿ 1ರ ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು ಐದು ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಜನವರಿ 5ರಂದು ಎಲ್ಲಾ ಮತಗಟ್ಟೆಗಳಲ್ಲಿ, ಉಪ ವಿಭಾಗೀಯ, ತಾಲೂಕು ಕಚೇರಿ ಸೇರಿದಂತೆ ಜಿಲ್ಲಾಧಿಕಾರಿಯ ಕಚೇರಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದರು.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 1,12,126 ಗಂಡಸರು, 1,17,421 ಮಹಿಳೆಯರು, 3 ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 2,29,550 ಮತದಾರರಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 98,224 ಗಂಡಸರು, 1,06,298 ಮಹಿಳೆಯರು, 3 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,04,525 ಮತದಾರರಿದ್ದಾರೆ ಎಂದು ತಿಳಿಸಿದರು.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 1,02,192 ಗಂಡಸರು, 1,09,439 ಮಹಿಳೆಯರು ಸೇರಿದಂತೆ ಒಟ್ಟು 2,11,631 ಮತದಾರರಿದ್ದು, ತೃತೀಯ ಲಿಂಗಿ ಮತದಾರರಿರುವುದಿಲ್ಲ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ 88,114 ಗಂಡಸರು, 95,968 ಮಹಿಳೆಯರು, 6 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 1,84,088 ಮತದಾರರಿದ್ದಾರೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 89,404 ಗಂಡಸರು, 97,047 ಮಹಿಳೆಯರು, ಸೇರಿದಂತೆ ಒಟ್ಟು 1,86,451 ಮತದಾರರಿದ್ದಾರೆ ಎಂದರು.
ಒಟ್ಟಾರೆಯಾಗಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 4,90,060 ಗಂಡಸರು, 5,26173 ಮಹಿಳೆಯರು, 12 ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 10,16,245 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಅವಧಿಯಲ್ಲಿ ಹೊಸದಾಗಿ 16,827 ಮತದಾರರು ಸೇರ್ಪಡೆಯಾದರೆ, 5783 ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. 13,321 ಮಂದಿಯ ತಿದ್ದುಪಡಿ ಹಾಗೂ ವರ್ಗಾವಣೆಗೊಳಿಸಲಾಗಿದೆ. ಈ ಬಾರಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಸಂದರ್ಭದಲ್ಲಿ 13,816 ಯುವ ಮತದಾರರು ಹಾಗೂ 11,331 ವಿಶೇಷ ಚೇತನರು ನೋಂದಣಿಯಾಗಿರುತ್ತಾರೆ ಎಂದರು.
ಮತದಾರರ ಪಟ್ಟಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಾರ್ವಜನಿಕರು ಪಡೆಯುವ ಸಲುವಾಗಿ , ಉಡುಪಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಟ್ಟದ ಮತದಾರರ ಸಹಾಯವಾಣಿ ಕೇಂದ್ರ ತೆರೆದು ಸಾರ್ವಜನಿಕರು ಮಾಹಿತಿಗಳನ್ನು ಉಚಿತವಾಗಿ ಕರೆಗಳ ಮೂಲಕ ಪಡೆಯಲು ಟೋಲ್ ಪ್ರೀ ಸಂಖ್ಯೆ 1950 ಅಳವಡಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಅಜ್ಜರಕಾಡು ಪುರಭವನದಲ್ಲಿ ನಡೆಯುತ್ತಿದ್ದು, ಅದೇ ರೀತಿಯಲ್ಲಿ ತಾಲೂಕು ಮತ್ತು ಮತಗಟ್ಟೆಗಳ ವ್ಯಾಪ್ತಿಯಲ್ಲಿ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.