ಪ್ರತಿ ಕ್ಯಾನ್ಸರ್ ರೋಗಿಗೆ ವಿಭಿನ್ನ ಚಿಕಿತ್ಸೆ ಅಗತ್ಯ: ಡಾ.ಸುಷ್ಮಾ ಭಟ್ನಾಗರ್
ಮಣಿಪಾಲ: ಅಂತಾರಾಷ್ಟ್ರೀಯ ಜಾಗತಿಕ ಕ್ಯಾನ್ಸರ್ ಒಕ್ಕೂಟ ಸಮ್ಮೇಳನ
ಉಡುಪಿ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಜಾಗತಿಕ ಕ್ಯಾನ್ಸರ್ ಒಕ್ಕೂಟ ಮತ್ತು ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಎರಡನೇ ಅಂತಾರಾಷ್ಟ್ರೀಯ ಜಾಗತಿಕ ಕ್ಯಾನ್ಸರ್ ಒಕ್ಕೂಟದ ಸಮ್ಮೇಳನ ಶನಿವಾರ ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿವ್ಯೆ ಹೊಟೇಲ್‌ನಲ್ಲಿ ಪ್ರಾರಂಭಗೊಂಡಿತು.
ಸಮ್ಮೇಳನವನ್ನು ಭಾರತ ಸರಕಾರದ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ನಿರ್ದೇಶಕಿ ಮತ್ತು ಹೊಸದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಎಐಐಎಂಎಸ್) ಕ್ಯಾನ್ಸರ್ ರೋಟರಿ ಆಸ್ಪತ್ರೆಯ ಮುಖ್ಯಸ್ಥೆ ಡಾ. ಸುಷ್ಮಾ ಭಟ್ನಾಗರ್ ಉದ್ಘಾಟಿಸಿ ಮಾತನಾಡಿ,ಕ್ಯಾನ್ಸರ್ ರೋಗಿಗಳನ್ನು ಅವರ ಪರಿಸ್ಥಿತಿ ಹಾಗೂ ರೋಗ ಲಕ್ಷಣಗಳಿಗೆ ಅನುಗುಣವಾಗಿ ವಿಭಿನ್ನ ರೀತಿಯಲ್ಲಿ ನೋಡಬೇಕು. ಆಗ ಮಾತ್ರ ರೋಗಿಗೆ ನಿಖರ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದರು.
ಅಮೆರಿಕದ ಕೆಂಟುಕಿ ವಿವಿಯ ಮಾರ್ಕಿ ಕ್ಯಾನ್ಸರ್ ಸೆಂಟರ್‌ನ ಸಹ ನಿರ್ದೇಶಕ ಡಾ. ವಿವೇಕ್ ರಂಗೇಕರ್ ಮಾತನಾಡಿ, ಜಾಗತಿಕ ಕ್ಯಾನ್ಸರ್ ಒಕ್ಕೂಟದ ಚಟುವಟಿಕೆಗಳು ಹಾಗೂ ಅದು ಆಯೋಜಿಸುತ್ತಿರುವ ಸಮ್ಮೇಳನದ ಮಹತ್ವದ ಕುರಿತು ವಿವರಗಳನ್ನು ನೀಡಿದರು.
ಮಾಹೆಯ ಆರೋಗ್ಯ ವಿಜ್ಞಾನದ ಪ್ರೊ ವೈಸ್ ಚಾನ್ಸಲರ್ ಡಾ. ಶರತ್ ಕುಮಾರ್ ರಾವ್ ಮಾತನಾಡಿ, ಪ್ರತಿ ಕ್ಯಾನ್ಸರ್ ರೋಗಿಗೆ ನಿಖರವಾದ ಕ್ಯಾನ್ಸರ್ ಚಿಕಿತ್ಸೆ ಎಂದು ಕರೆಯಲ್ಪಡುವ ವಿಭಿನ್ನ ಚಿಕಿತ್ಸೆಯನ್ನು ಹೊಂದಿರುತ್ತದೆ. ಫಾರ್ಮಾಕೋಜೆನೆಟಿಕ್ಸ್‌ನ ಒಳಗೊಳ್ಳುವಿಕೆ, ವೈದ್ಯಕೀಯ ತಳಿಶಾಸ್ತ್ರವು ಇದರಲ್ಲಿ ಮುಖ್ಯವಾಗಿದೆ. ಏಕೆಂದರೆ ವಂಶವಾಹಿಗಳನ್ನು ಗುರುತಿಸಿದಾಗ, ಉತ್ತಮ ಚಿಕಿತ್ಸೆ ನೀಡಿ ಬೆಳವಣಿಗೆಯನ್ನು ಗುರುತಿಲು ಸಾಧ್ಯವಾಗುತ್ತದೆ. ಈ ಎಲ್ಲಾ ಸೌಲಭ್ಯಗಳು ಹಾಗೂ ಬೇಕಾದ ನಿಖರ ಔಷಧಗಳು ಮಣಿಪಾಲದಲ್ಲಿವೆ ಎಂದರು.
ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅದ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯಕೀಯ ಆಂಕೋಲಜಿ, ಸರ್ಜಿಕಲ್ ಆಂಕೊಲಜಿ, ರೇಡಿಯೊಥೆರಪಿ ಮತ್ತು ಆಂಕೋಲಜಿ, ಮಕ್ಕಳ ಶಾಸ್ತ್ರ ಮತ್ತು ಆಂಕೋಲಜಿ, ಉಪಶಾಮಕ ಆರೈಕೆ ಔಷಧ ಮತ್ತು ನ್ಯೂಕ್ಲಿಯರ್ ಮೆಡಿಸಿನ್ ಸೇರಿದಂತೆ ಎಲ್ಲ ಸೌಲಭ್ಯವನ್ನು ಮಣಿಪಾಲದ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದಲ್ಲಿ ಒಂದೇ ಸೂರಿನಡಿ ನೀಡುತ್ತಿದ್ದೇವೆ. ನಾವೀಗ ಹೊಸ ವಿಶ್ರಾಂತಿ ಕೇಂದ್ರದ ಆರೈಕೆಯನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ತಿಳಿಸಿದರು.
ಮಣಿಪಾಲ ವೈದ್ಯಕೀಯ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ. ಕಾರ್ತಿಕ್ ಉಡುಪ ಸಮ್ಮೇಳನದ ಅವಲೋಕನ ನೀಡಿದರು. ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ. ಅನಂತ್ ಪೈ, ಕಾರ್ಯದರ್ಶಿ ಡಾ.ಶೆರ್ಲಿ ಲೀವಿಸ್ ಉಪಸ್ಥಿತ ರಿದ್ದರು.
ಕೆಎಂಸಿ ಮಣಿಪಾಲದ ಡೀನ್ ಡಾ. ಪದ್ಮರಾಜ್ ಹೆಗ್ಡೆ ಸ್ವಾಗತಿಸಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ವಂದಿಸಿದರು.ಡಾ ಕೃತಿಕಾ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಸಮ್ಮೇಳನದಲ್ಲಿ 200ಕ್ಕೂ ಹೆಚ್ಚು ದೇಶ ವಿದೇಶಗಳ ಪ್ರತಿನಿಧಿಗಳು ಮತ್ತು ಸಂಪನ್ಮೂಲ ವ್ಯಕಿಗಳು ಭಾಗವಹಿಸಿದ್ದಾರೆ.ಅಂತಾರಾಷ್ಟ್ರೀಯ ಸಂಸ್ಥೆಗಳಾದ ಮಾರ್ಕಿ ಕ್ಯಾನ್ಸರ್ ಸೆಂಟರ್, ಮೇಯೊ ಕ್ಲಿನಿಕ್, ಲಾಹೆ ಹಾಸ್ಪಿಟಲ್ ಹಾಗೂ ಮೆಡಿಕಲ್ ಸೆಂಟರ್ ಮತ್ತು ಅಲಬಾಮಾ ವಿಶ್ವವಿದ್ಯಾಲಯದಿಂದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದಾರೆ.