ಇರಾನ್: ಮೂವರು ಪ್ರತಿಭಟನಕಾರರಿಗೆ ಮರಣದಂಡನೆ ಘೋಷಣೆ

ಟೆಹರಾನ್, ಜ.10: ಇರಾನ್‌ನ ನ್ಯಾಯಾಲಯವೊಂದು ಇನ್ನೂ ಮೂವರು ಸರಕಾರಿ ವಿರೋಧಿ ಪ್ರತಿಭಟನಕಾರರಿಗೆ ಮರಣದಂಡನೆ ವಿಧಿಸಿರುವುದಾಗಿ ಇರಾನಿ ಸುದ್ದಿಸಂಸ್ಥೆ ‘ಮಿಝಾನ್’ ಸೋಮವಾರ ವರದಿ ಮಾಡಿದೆ.
ಆಡಳಿತ ವಿರೋಧಿ ಪ್ರತಿಭಟನಕಾರರನ್ನು ಸರಕಾರವು ಅತ್ಯಂತ ಬರ್ಬರವಾಗಿ ಹತ್ತಿಕ್ಕುತ್ತಿದೆಯೆಂಬ ಅಂತಾರಾಷ್ಟ್ರೀಯ ಖಂಡನೆಗಳು ವ್ಯಕ್ತವಾಗುತ್ತಿರುವ ನಡುವೆಯೇ ನ್ಯಾಯಾಲಯ ಮೂವರಿಗೆ ಮರಣದಂಡನೆಯನ್ನು ಘೋಷಿಸಿದೆ.
ಸಲೇಹ್ ಮಿರಾಹಾಶೆಮಿ, ಮಜೀದ್ ಕಾಝೆಮಿ ಹಾಗೂ ಸದೀಯ್ ಯಾಗೂಬಿ ಎಂಬವರಿಗೆ ಮರಣದಂಡನೆಯನ್ನು ಘೋಷಿಸಲಾಗಿದೆಯೆದು ಮಿಝಾನ್ ವರದಿ ಮಾಡಿದೆ. ಇಸ್‌ಫಾಹನ್ ನಗರದಲ್ಲಿ ಸರಕಾರಿ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಬಾಸ್‌ಜಿ ಭದ್ರತಾಪಡೆಯ ಸದಸ್ಯರ ಹತ್ಯೆ ಪ್ರಕರಣದಲ್ಲಿ ಈ ಮೂವರು ದೋಷಿಗಳೆಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆಯೆಂದು ಅದು ಹೇಳಿದೆ.
ಆದರೆ ಈ ಮೂವರು ಗಲ್ಲು ಶಿಕ್ಷೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದೆಯೆಂದು ವರದಿ ತಿಳಿಸಿದೆ. ಇರಾನ್‌ನ ಅತ್ಯುನ್ನತ ಸೇನಾಪಡೆಯಾದ ‘ರೆವೆಲ್ಯೂಶನರಿ ಗಾರ್ಡ್ಸ್’ನ ಅಂಗ ಘಟಕವಾದ ಬಾಸ್‌ಜಿ ಪಡೆಗಳು, ದೇಶದಲ್ಲಿ ನಡೆಯುತ್ತಿರುವ ಸರಕಾರಿ ವಿರೋಧಿ ಪ್ರತಿಭಟನೆಯನ್ನು ಹತ್ತಿಕ್ಕುವಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸಿವೆ.
ಪ್ರತಿಭಟನಕಾರರ ದಮನಕಾರ್ಯಾಚರಣೆಯನ್ನು ಇರಾನ್ ದುಪ್ಪಟ್ಟುಗೊಳಿಸಿರುವ ಹೊರತಾಗಿಯೂ ಟೆಹರಾನ್, ಇಸ್ಫಾಹನ್ ಹಾಗೂ ಇತರ ಹಲವಾರು ನಗರಗಳಲ್ಲಿ ಸಣ್ಣ ಮಟ್ಟದ ಪ್ರತಿಭಟನೆಗಳು ಮುಂದುವರಿದಿರುವುದಾಗಿ ಮೂಲಗಳು ತಿಳಿಸಿವೆ.
ಸರಕಾರಿ ವಿರೋಧಿ ಪ್ರತಿಭಟನೆ ಆರಂಭವಾದ ಬಳಿ ಇರಾನ್‌ನಲ್ಲಿ ಈವರೆಗೆ ನಾಲ್ವರು ಪ್ರತಿಭಟನಕಾರರನ್ನು ಗಲ್ಲಿಗೇರಿಸಲಾಗಿದೆ. ಬಾಸ್ಜಿ ಪಡೆಯ ಸದಸ್ಯನೊಬ್ಬನನ್ನು ಹತ್ಯೆಗೈದ ಆರೋಪದಲ್ಲಿ ಶನಿವಾರ ಇಬ್ಬರು ಪ್ರತಿಭಟನಕಾರರನ್ನು ಗಲ್ಲಿಗೇರಿಸಲಾಗಿತ್ತು.