ಫೆ.4ರಂದು ಉಳ್ಳಾಲದಲ್ಲಿ ವೀರ ರಾಣಿ ಅಬ್ಬಕ್ಕ ಉತ್ಸವ

-ಉಳ್ಳಾಲ: ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಇದರ ಆಶ್ರಯದಲ್ಲಿ 2022-23ನೇ ಸಾಲಿನ ವೀರ ರಾಣಿ ಅಬ್ಬಕ್ಕ ಉತ್ಸವವನ್ನು ದಾನಿಗಳ ದೇಣಿಗೆ ಸಂಗ್ರಹ ಮಾಡಿ ಫೆ.4ರಂದು ಉಳ್ಳಾಲದ ಮಹಾತ್ಮ ಗಾಂಧಿ ರಂಗ ಮಂದಿರದಲ್ಲಿ ಆಚರಿಸಲಾಗುವುದು ಎಂದು ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಉಳ್ಳಾಲ ಇದರ ಸ್ವಾಗತಾಧ್ಯಕ್ಷ ಕೆ.ಜಯರಾಮ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ಆರಂಭಗೊಳ್ಳಲಿದ್ದು, ಸಂಜೆಯವರೆಗೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎಸ್ ರಾಜೇಂದ್ರ ಕುಮಾರ್ ನೆರವೇರಿಸಲಿದ್ದಾರೆ. ಸಮಾರೋಪದಲ್ಲಿ ಸಚಿವ ಸುನೀಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಯುಟಿ ಖಾದರ್ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಅಬ್ಬಕ್ಕ ಭವನಕ್ಕೆ ತೊಕ್ಕೊಟ್ಟು ಬಸ್ ತಂಗುದಾಣ ಬಳಿ 41 ಸೆಂಟ್ಸ್ ಜಾಗದಲ್ಲಿ ಶಂಕುಸ್ಥಾಪನೆ ನೆರವೇರಿಸಿ 11 ವರ್ಷ ಕಳೆದಿದೆ. ಅಬ್ಬಕ್ಕ ಭವನ ನಿರ್ಮಾಣ ಮಾತ್ರ ಆಗಿಲ್ಲ. ಈಗ ಸರ್ಕಾರ ಮಂಜೂರು ಮಾಡಿದ ಹಣ ಬಳಕೆ ಮಾಡಿ ಶೀಘ್ರ ಅಬ್ಬಕ್ಕ ಭವನ ನಿರ್ಮಾಣ ಮಾಡಬೇಕೆಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಮೂಲಕ ಒತ್ತಾಯಿಸಲಾಗಿದೆ ಎಂದು ಹೇಳಿದರು.
ಅಧ್ಯಕ್ಷ ದಿನಕರ್ ಉಳ್ಳಾಲ ಮಾತನಾಡಿ, ಈ ಬಾರಿ ಅಬ್ಬಕ್ಕ ಉತ್ಸವ ಕಾರ್ಯಕ್ರಮ ನಡೆಸಲು ಸರ್ಕಾರ ದಿಂದ 10 ಲಕ್ಷ ರೂ. ಅನುದಾನ ಜಿಲ್ಲಾಡಳಿತಕ್ಕೆ ಬಂದಿದೆ. ಅಬ್ಬಕ ಉತ್ಸವ ಮಾಡುವ ಬಗ್ಗೆ ನಾವು ಜಿಲ್ಲಾಧಿಕಾರಿ ಜೊತೆ ಸಭೆ ನಡೆಸಿದ್ದೇವೆ.ಅವರು ಎಲ್ಲದಕ್ಕೂ ಒಪ್ಪಿದರೂ ಹಣ ಮಂಜೂರು ಮಾಡುವ ಗೋಜಿಗೆ ಹೋಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ದೇಣಿಗೆ ಸಂಗ್ರಹ ಮಾಡಿ ಕಾರ್ಯಕ್ರಮ ಮಾಡಲು ನಿರ್ಧಾರ ಮಾಡಿದ್ದೇವೆ. ಈ ಉತ್ಸವದಲ್ಲಿ ಕನ್ನಡ, ತುಳು, ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿ, ವಿಚಾರ ಗೋಷ್ಠಿ, ನಾಟಕ, ಯಕ್ಷಗಾನ ಅಬ್ಬಕ್ಕ ಪ್ರಶಸ್ತಿ, ಪುರಸ್ಕಾರ ನಡೆಯಲಿದೆ. ಈ ಹಿಂದೆ ಸರ್ಕಾರವೇ ಅಬ್ಬಕ್ಕ ಉತ್ಸವ ನಡೆಸಿತ್ತು. ಅದು ಯಶಸ್ವಿ ಆಗದ ಕಾರಣ ನಾವು ಸಾರ್ವಜನಿಕರ ಸಹಕಾರದಿಂದ ಮಾಡಲೀದ್ದೇವೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಸಮಿತಿಯ ಗೌರವ ಅಧ್ಯಕ್ಷ ಸದಾನಂದ ಬಂಗೇರ, ಕೋಶಾಧಿಕಾರಿ ಆನಂದ ಅಸೈಗೋಳಿ, ಉಪಾಧ್ಯಕ್ಷ ಆಲಿಯಬ್ಬ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ವಾಸುದೇವ, ದೇವಕಿ ಉಪಸ್ಥಿತರಿದ್ದರು.