ಕುಂದಾಪುರ | ಬೈಕ್ ಢಿಕ್ಕಿ: ಪಾದಚಾರಿ ಮೃತ್ಯು

ಕುಂದಾಪುರ, ಜ.15: ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೋಣಿ ಗ್ರಾಮದ ಕಟ್ಕೇರಿಯ ಶಂಕರ ಮಡಿವಾಳರ ಹೊಟೇಲ್ ಬಳಿ ಜ.14ರಂದು ಸಂಜೆ ವೇಳೆ ನಡೆದಿರುವುದಾಗಿ ವರದಿಯಾಗಿದೆ.
ಮೃತರನ್ನು ಚಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಕೋಟೇಶ್ವರ ಕಡೆಯಿಂದ ಹಾಲಾಡಿ ಕಡೆಗೆ ಹೋಗುತ್ತಿದ್ದ ಬೈಕ್, ರಸ್ತೆಯ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಚಂದ್ರ ಕುಮಾರ್ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಚಂದ್ರ ಕುಮಾರ್ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಅಪಘಾತದಲ್ಲಿ ಗಾಯಗೊಂಡಿರುವ ಬೈಕ್ ಸವಾರ ಪ್ರದೀಪ್ ಮಣಿಪಾಲ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story