ಬಂಟ್ವಾಳ: ಕಳವು ಪ್ರಕರಣ; ಸೊತ್ತು ಸಹಿತ ಆರೋಪಿಗಳ ಬಂಧನ

ಬಂಟ್ವಾಳ: ಸೆಂಟ್ರಿಂಗ್ ಶೀಟ್ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಠಾಣೆ ಪೊಲೀಸರು ಆರೋಪಿಗಳನ್ನು ಕಳವುಗೈದ ಸೊತ್ತು ಸಹಿತ ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತರನ್ನು ತುಂಬೆ ಗ್ರಾಮದ ಬೊಳ್ಳಾರಿ ನಿವಾಸಿ ಅನ್ಸಾಫ್ (34) ಹಾಗೂ ತುಂಬೆ ಗ್ರಾಮದ ಮದಕ ನಿವಾಸಿ ನವಾಝ್ (24) ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಕಳವು ಮಾಡಿದ 97,900 ರೂ. ಮೌಲ್ಯದ 89 ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ ಆರೋಪಿಗಳು ಫೆ 12 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ 21 ಗೋಣಿ ಚೀಲಗಳಲ್ಲಿ 90,000 ರೂಪಾಯಿ ಮೌಲ್ಯದ 401 ಕೆ ಜಿ ಅಡಿಕೆಯನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆ 7ರಂದು ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿ ಎಂಬಲ್ಲಿ ನಿರ್ಮಾಣದ ಹಂತದ ಕಟ್ಟಡದ ಬಳಿ ಫಾರೂಕ್ ಎಂಬವರ 89 ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳನ್ನು ಕಳವುಗೈಯಲಾಗಿತ್ತು. ಈ ಬಗ್ಗೆ ಠಾಣೆಯಲ್ಲಿ ದಾಖಲಾದ ದೂರಿನಂತೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲಾ ಎಸ್ಪಿ ಡಾ. ವಿಕ್ರಂ ಅಮಾಟೆ, ಮಾರ್ಗದರ್ಶನದಲ್ಲಿ ಬಂಟ್ವಾಳ ಎ ಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ಹಾಗೂ ಬಂಟ್ವಾಳ ನಗರ ಠಾಣಾ ಇನ್ಸ್ ಪೆಕ್ಟರ್ ವಿವೇಕಾನಂದ ಅವರ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣಾ ಅಪರಾಧ ವಿಭಾಗದ ಎಎಸ್ಐ ಗಳಾದ ನಾರಾಯಣ, ಜಿನ್ನಪ್ಪ ಗೌಡ, ಎಚ್. ಸಿ. ಗಳಾದ ಇರ್ಷಾದ್ ಪಿ , ರಾಜೇಶ್, ಗಣೇಶ್, ಮನೋಹರ, ಪಿಸಿ ಗಳಾದ ಪ್ರವೀಣ್, ಮೋಹನ ಅವರು ಭಾಗವಹಿಸಿರುತ್ತಾರೆ.