ಉಕ್ರೇನ್ ಗೆ ಅಮೆರಿಕದ ಪ್ರಚೋದನೆ: ರಶ್ಯ ಆರೋಪ

ಮಾಸ್ಕೊ, ಫೆ.18: ರಶ್ಯದ ಪ್ರದೇಶಗಳಿಗೆ ನೇರವಾಗಿ ದಾಳಿ ನಡೆಸುವಂತೆ ಉಕ್ರೇನ್ಗೆ ಅಮೆರಿಕ ಪ್ರಚೋದನೆ ನೀಡುತ್ತಿದೆ. ಇದೀಗ ಅಮೆರಿಕವು ಈ ಯುದ್ಧದಲ್ಲಿ ನೇರವಾಗಿ ಪಾಲ್ಗೊಂಡಿದ್ದು ನಮಗೆ ಬೇರೆ ಆಯ್ಕೆಗಳಿಲ್ಲ. ನಮ್ಮ ನೆಲ, ಅಸ್ಮಿತೆ ಮತ್ತು ಭವಿಷ್ಯಕ್ಕೆ ಹಾನಿಯಾಗಲು ಬಿಡುವುದಿಲ್ಲ ಎಂದು ರಶ್ಯ ಹೇಳಿದೆ.
ಉಕ್ರೇನ್ ಬಿಕ್ಕಟ್ಟು ಅಂತ್ಯಗೊಳ್ಳುವುದು ಅಮೆರಿಕಕ್ಕೆ ಇಷ್ಟವಿಲ್ಲ. ಅಮೆರಿಕದ ಯುದ್ಧಪ್ರಿಯರು ಇನ್ನಷ್ಟು ಮುಂದೆ ಸಾಗಿದ್ದಾರೆ. ಉಕ್ರೇನ್ನ ಆಡಳಿತವನ್ನು ಪ್ರಚೋದಿಸಿ ಯುದ್ಧವನ್ನು ನಮ್ಮ ಪ್ರದೇಶಕ್ಕೆ ವರ್ಗಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯಲ್ಲಿನ ರಶ್ಯದ ರಾಯಭಾರಿ ವ್ಯಾಸಿಲಿ ನೆಬೆಂಝಿಯಾ ಆರೋಪಿಸಿದ್ದಾರೆ.
ಇಟಲಿಯಲ್ಲಿ ರಶ್ಯದ ಕಲಾವಿದರ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ರಶ್ಯದ ವಿದೇಶಾಂಗ ಇಲಾಖೆ, ಇಟಲಿ ಅಧಿಕಾರಿಗಳು ತಾರತಮ್ಯದಿಂದ ವರ್ತಿಸಿದ್ದು ಈ ಬಗ್ಗೆ ಇಟಲಿಯ ರಾಯಭಾರಿಯನ್ನು ಕರೆಸಿ ಪ್ರತಿಭಟನೆ ಸಲ್ಲಿಸಲಾಗಿದೆ ಎಂದಿದೆ.
ಈ ಮಧ್ಯೆ, ಶುಕ್ರವಾರ ಜರ್ಮನಿಯ ಮ್ಯೂನಿಚ್ ನಲ್ಲಿ ನಡೆಯುತ್ತಿರುವ ಭದ್ರತಾ ಸಮಾವೇಶದಲ್ಲಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ `ರಶ್ಯ ಅಧ್ಯಕ್ಷ ಪುಟಿನ್ ಅವರ ಆಕ್ರಮಣ ಪಟ್ಟಿಯಲ್ಲಿ ಉಕ್ರೇನ್ ಕೊನೆಯ ನಿಲ್ದಾಣವಾಗಿರುವುದಿಲ್ಲ. ಅವರ ಪಟ್ಟಿ ಇನ್ನೂ ಉದ್ದವಿದೆ, ಅವರು ಈ ಹಿಂದೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಇನ್ನೂ ಕೆಲವು ದೇಶಗಳತ್ತ ಮುನ್ನುಗ್ಗಲಿದ್ದಾರೆ. ರಶ್ಯದ ಧಾವಂತವನ್ನು ತಡೆಯಲು ಅಗತ್ಯವಾದ ಟ್ಯಾಂಕ್ ಗಳ ಪೂರೈಕೆಯ ಬಗ್ಗೆ ಪಾಶ್ಚಿಮಾತ್ಯರು ನಿರ್ಧಾರಕ್ಕೆ ಬರುವ ವೇಳೆಗೆ ಮೋಲ್ದೋವಾ ದೇಶದ ಕತ್ತುಹಿಸುಕುವ ವಿಧಾನದ ಬಗ್ಗೆ ಪುಟಿನ್ ತಂತ್ರ ರೂಪಿಸಿರುತ್ತಾರೆ' ಎಂದು ಹೇಳಿದ್ದಾರೆ.
ಕಳೆದ ವರ್ಷ ಇದೇ ಸಂದರ್ಭ ನಡೆದಿದ್ದ ಮ್ಯೂನಿಚ್ ಸಮಾವೇಶದಲ್ಲಿ ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಮೇಲೆ ಆಕ್ರಮಣ ನಡೆಸಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಶ್ಯಕ್ಕೆ ಎಚ್ಚರಿಕೆ ನೀಡಿದ್ದರು. ಈ ವರ್ಷ ನಡೆಯುತ್ತಿರುವ ಸಮಾವೇಶದಲ್ಲಿ, ರಶ್ಯದ ಆಕ್ರಮಣದಿಂದ ಆಗಿರುವ ಪರಿಣಾಮದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸುಮಾರು 1 ವರ್ಷದ ಹಿಂದೆ ಉಕ್ರೇನ್ ಮೇಲೆ ರಶ್ಯ ಆಕ್ರಮಣ ಆರಂಭಿಸಿದ ನಂತರ ಯುರೋಪ್ನ ಭದ್ರತಾ ಪರಿಸ್ಥಿತಿಯನ್ನು ಚರ್ಚಿಸಲು ವಿಶ್ವನಾಯಕರು, ಮಿಲಿಟರಿ ಅಧಿಕಾರಿಗಳು ಮತ್ತು ರಾಜತಾಂತ್ರಿಕರು ಮ್ಯೂನಿಚ್ ನಲ್ಲಿ ಸಭೆ ಸೇರಿದ್ದಾರೆ. ಮೂರು ದಿನ ನಡೆಯಲಿರುವ ಈ ಸಭೆಯಲ್ಲಿ ಅಮೆರಿಕ, ಯುರೋಪ್, ಚೀನಾ ಸೇರಿದಂತೆ ಸುಮಾರು 100 ದೇಶಗಳ ಭದ್ರತಾ ತಜ್ಞರು, ಸುಮಾರು 40 ದೇಶಗಳ ಮುಖ್ಯಸ್ಥರು ಪಾಲ್ಗೊಳ್ಳುವ ನಿರೀಕ್ಷೆಯಿದೆ.