ಬ್ರೆಝಿಲ್: ಭೀಕರ ಮಳೆಗೆ 36 ಮಂದಿ ಬಲಿ

ಬ್ರಸೀಲಿಯಾ, ಫೆ.20: ಬ್ರೆಝಿಲ್ ನ ನಾರ್ಥ್ ಸಾವೊಪಾಲೊ ರಾಜ್ಯದಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ಹಲವೆಡೆ ಭೂಕುಸಿತ ಸಂಭವಿಸಿದ್ದು 36 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಸಾವೊಸೆಬಾಸ್ಟಿಯೊ ನಗರದಲ್ಲಿ 35 ಮಂದಿ ಮತ್ತು ನೆರೆಯ ಉಬಾಟುಬ ನಗರದಲ್ಲಿ 7 ವರ್ಷದ ಬಾಲಕಿ ಮೃತಪಟ್ಟಿರುವುದಾಗಿ ಸಾವೊಪಾಲೊದ ಗವರ್ನರ್ ಹೇಳಿದ್ದಾರೆ.
ಸಾವೊಸೆಬಾಸ್ಟಿಯೊ , ಉಬಾಟುಬ, ಇಲ್ಹಬೆಲ, ಬೆರ್ಟಿಯೊಗ ಮುಂತಾದ ನಗರಗಳಲ್ಲಿ ಭಾರೀ ಮಳೆ ಹಾಗೂ ಪ್ರವಾಹದ ಸಮಸ್ಯೆಯಿಂದ ಹಲವೆಡೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು ಕಾರ್ನಿವಲ್ ಹಬ್ಬಗಳನ್ನು ರದ್ದುಗೊಳಿಸಲಾಗಿದೆ. ಭೂಕುಸಿತದಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದ್ದು ಕಲ್ಲುಮಣ್ಣಿನ ರಾಶಿಯಡಿ ಇನ್ನಷ್ಟು ಮಂದಿ ಸಿಲುಕಿರುವ ಸಾಧ್ಯತೆಯಿದೆ. ಸಾವೊಸೆಬಾಸ್ಟಿಯೊ ನಗರದಲ್ಲಿ 50 ಮನೆಗಳು ಕುಸಿದುಬಿದ್ದಿದ್ದು 20ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಈ ವಲಯದಲ್ಲಿ ರವಿವಾರ 23.6 ಇಂಚಿನಷ್ಟು ದಾಖಲೆ ಮಳೆ ಸುರಿದಿದ್ದು ರಕ್ಷಣಾ ಕಾರ್ಯಕ್ಕೆ ನೆರವಾಗಲು ಸೇನೆಯ 2 ವಿಮಾನಗಳನ್ನು ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಛಾವಣಿಯವರೆಗೆ ಜಲಾವೃತಗೊಂಡಿರುವ ಮನೆಗಳಿಂದ ಜನರನ್ನು, ಸಾಕುಪ್ರಾಣಿಗಳನ್ನು ಹಾಗೂ ಅಗತ್ಯದ ವಸ್ತುಗಳನ್ನು ದೋಣಿಗಳ ಮೂಲಕ ಸುರಕ್ಷಿತ ಪ್ರದೇಶಕ್ಕೆ ಸಾಗಿಸುತ್ತಿರುವ ವೀಡಿಯೊಗಳನ್ನು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿವೆ. ಬ್ರೆಝಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಸೋಮವಾರ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.