ಉಕ್ರೇನ್ ಗೆ ಅಮೆರಿಕ ಅಧ್ಯಕ್ಷರ ಅಘೋಷಿತ ಭೇಟಿ: ಉಕ್ರೇನ್ ನ ಸ್ಥಿರತೆ ಪ್ರಜಾಪ್ರಭುತ್ವದ ಸ್ಥಿರತೆಯ ಪ್ರತೀಕ; ಬೈಡನ್

ಕೀವ್, ಫೆ.20: ಉಕ್ರೇನ್ ಗೆ ಸೋಮವಾರ ಅಘೋಷಿತ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, ರಶ್ಯದ ಆಕ್ರಮಣವನ್ನು ಒಂದು ವರ್ಷ ಎದುರಿಸಿ ನಿಂತ ಉಕ್ರೇನಿಯನ್ನರ ಶೌರ್ಯವನ್ನು ಶ್ಲಾಘಿಸಿದ ಜತೆಗೆ, ಉಕ್ರೇನ್ ಗೆ ಅಮೆರಿಕದಿಂದ 500 ದಶಲಕ್ಷ ಡಾಲರ್ ಮೊತ್ತದ ಹೊಸ ಮಿಲಿಟರಿ ನೆರವಿನ ವಾಗ್ದಾನವನ್ನು ಘೋಷಿಸಿದ್ದಾರೆ.
ಉಕ್ರೇನ್ ಮೇಲಿನ ರಶ್ಯದ ಆಕ್ರಮಣ ಆರಂಭವಾಗಿ ಫೆಬ್ರವರಿ 24ಕ್ಕೆ ಒಂದು ವರ್ಷ ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್ ಗೆ ಅಘೋಷಿತ, ಅನಿರೀಕ್ಷಿತ ಭೇಟಿ ನೀಡಿ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬೈಡನ್ `ಒಂದು ವರ್ಷದ ಹಿಂದೆ ರಶ್ಯ ಪಡೆ ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದಾಗ ಉಕ್ರೇನ್ ಕ್ಷಿಪ್ರವಾಗಿ ರಶ್ಯದ ಕೈವಶವಾಗಲಿದೆ ಎಂಬ ಭಾವನೆಯಿತ್ತು. ಆದರೆ ಒಂದು ವರ್ಷವಾದರೂ ಉಕ್ರೇನ್ ದೃಢವಾಗಿ ನಿಂತಿದೆ. ಉಕ್ರೇನ್ ಜತೆ ಪ್ರಜಾಪ್ರಭುತ್ವವೂ ಸ್ಥಿರವಾಗಿ ನಿಂತಿದೆ. ಅಮೆರಿಕ ನಿಮ್ಮ ಜತೆಗೆ ಇರಲಿದೆ, ಇಡೀ ವಿಶ್ವವೇ ನಿಮ್ಮ ಜತೆಗಿರಲಿದೆ' ಎಂದರು.
ರಶ್ಯ ಆರಂಭಿಸಿದ ಕ್ರೂರ ಮತ್ತು ಅನ್ಯಾಯದ ಯುದ್ಧಕ್ಕೆ ಸೋಲೇ ಗತಿಯಾಗಲಿದೆ. ಈ ಅನ್ಯಾಯದ ಯುದ್ಧದ ಪರಿಣಾಮವನ್ನು ಉಕ್ರೇನ್ ಅನುಭವಿಸಬೇಕಾಗಿದೆ ಮತ್ತು ಈ ದೇಶ ಮಾಡಿರುವ ತ್ಯಾಗವೂ ಎಣಿಕೆಗೆ ಮೀರಿದ್ದಾಗಿದೆ. ಮುಂಬರುವ ದಿನಗಳು ಇನ್ನಷ್ಟು ಕಠಿಣವಾಗಿರಲಿದೆ ಎಂಬುದು ನಮಗೆ ತಿಳಿದಿದೆ. ಆದರೆ ಉಕ್ರೇನ್ ದೇಶವನ್ನು ಜಾಗತಿಕ ನಕ್ಷೆಯಿಂದ ಅಳಿಸಿ ಹಾಕುವ ರಶ್ಯದ ಉದ್ದೇಶ ಈಡೇರದು. ಪುಟಿನ್ ಅವರ ಆಕ್ರಮಣದ ಯುದ್ಧ ವಿಫಲವಾಗಲಿದೆ ಎಂದು ಬೈಡನ್ ಹೇಳಿದರು.
ಅಮೆರಿಕ ವಾಗ್ದಾನ ನೀಡಿರುವ ಹೊಸ ಸೇನಾ ನೆರವಿನಲ್ಲಿ ಹೊವಿಟ್ಝರ್ ಫಿರಂಗಿಗಳ ಮದ್ದುಗುಂಡು, ಟ್ಯಾಂಕ್ ನಿರೋಧಕ ಕ್ಷಿಪಣಿಗಳು, ವಾಯು ಸರ್ವೇಕ್ಷಣಾ ರೇಡಾರ್ಗಳು ಹಾಗೂ ಇತರ ಶಸ್ತ್ರಾಸ್ತ್ರ ಸೇರಿದೆ. ಆದರೆ ನೂತನ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಈ ಪಟ್ಟಿಯಲ್ಲಿ ಸೇರಿಲ್ಲ. ಬೈಡನ್ ಹಾಗೂ ಝೆಲೆನ್ಸ್ಕಿ ಸೈಂಟ್ ಮೈಕೆಲ್ಸ್ ಕ್ಯಾಥೆಡ್ರಾಲ್ಗೆ ಭೇಟಿ ನೀಡಿ, ಅಲ್ಲಿರುವ ಯುದ್ಧವೀರರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ಬೈಡನ್ ಜತೆ ದೀರ್ಘ ಶ್ರೇಣಿಯ ಶಸ್ತ್ರಾಸ್ತ್ರಗಳು ಹಾಗೂ ಇದುವರೆಗೆ ಪೂರೈಸದ ಶಸ್ತ್ರಾಸ್ತ್ರಗಳನ್ನು ಒದಗಿಸುವ ಬಗ್ಗೆ ಮಾತುಕತೆ ನಡೆಸಿರುವುದಾಗಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ.
ಪೋಲಂಡ್ ನಿಂದ ಬೈಡನ್ ಗೆ ಭದ್ರತೆ ಒದಗಿಸಿದ ಅಮೆರಿಕ
ಉಕ್ರೇನ್ ನಲ್ಲಿ ಅಮೆರಿಕ ಯಾವುದೇ ಸೇನಾ ನೆಲೆಯನ್ನು ಹೊಂದಿಲ್ಲದ ಕಾರಣ ಯುದ್ಧಗ್ರಸ್ತ ದೇಶಕ್ಕೆ ಭೇಟಿ ನೀಡುವ ಅಮೆರಿಕ ಅಧ್ಯಕ್ಷರಿಗೆ ಭದ್ರತೆ ಒದಗಿಸುವುದು ಕಠಿಣ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ, ಪೋಲಂಡ್ನ ವಾಯುಕ್ಷೇತ್ರದ ಮೂಲಕ ಅಮೆರಿಕದ ಕಣ್ಗಾವಲು ವಿಮಾನಗಳು, ಇ-3 ವಾಯುಗಾಮಿ ರೇಡಾರ್ಗಳು, ಇಲೆಕ್ಟ್ರಾನಿಕ್ ಆರ್ಸಿ-135 ರಿವರ್ಜಾೈಂಟ್ ಯುದ್ಧವಿಮಾನಗಳು ಉಕ್ರೇನ್ನ ರಾಜಧಾನಿ ಕೀವ್ನ ಮೇಲೆ ಹದ್ದಿನಕಣ್ಣು ಇರಿಸಿತ್ತು ಎಂದು ಸೇನಾ ಮೂಲಗಳು ಹೇಳಿವೆ.