ಮಂಗಳೂರು ವಿವಿಯಿಂದ ಹಾಜಿ ಯು.ಕೆ.ಮೋನು, ಪ್ರೊ.ಎಂ.ಬಿ.ಪುರಾಣಿಕ್ ಸಹಿತ ಮೂವರಿಗೆ ಗೌರವ ಡಾಕ್ಟರೇಟ್
ಮಾ.15ರ ಘಟಿಕೋತ್ಸವದಲ್ಲಿ ಪದವಿ ಪ್ರದಾನ

ಮಂಗಳೂರು, ಮಾ.14: ಮಂಗಳೂರು ವಿಶ್ವವಿದ್ಯಾನಿಲಯ(Mangalore University)ದ 41ನೇ ವಾರ್ಷಿಕ ಘಟಿಕೋತ್ಸವದ ಸಂದರ್ಭದಲ್ಲಿ ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಯು.ಕೆ.ಮೋನು, ಕೃಷಿ ಕ್ಷೇತ್ರ, ಸಮಾಜ ಸೇವಾ ಕ್ಷೇತ್ರದ ಸಾಧಕ ಕುಂದಾಪುರ ಗಂಗೊಳ್ಳಿಯ ಜಿ.ರಾಮಕೃಷ್ಣ ಆಚಾರ್ ಮತ್ತು ಮಂಗಳೂರಿನ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ (Award of Honorary Doctorate Degrees) ಮಾಡಲು ಕುಲಾಧಿಪತಿ ಅನುಮೋದನೆ ನೀಡಿದ್ದಾರೆ ಎಂದು ವಿವಿಯ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.
ಮಂಗಳವಾರ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾ ಡುತ್ತಿದ್ದರು.
ಹಾಜಿ ಯು.ಕೆ.ಮೋನು ಮತ್ತು ಪ್ರೊ.ಎಂ.ಬಿ.ಪುರಾಣಿಕ್ ಅವರಿಗೆ ಶಿಕ್ಷಣ ಮತ್ತು ಸಮಾಜ ಸೇವೆಗಾಗಿ, ಅದೇರೀತಿ ಜಿ.ರಾಮಕೃಷ್ಣ ಆಚಾರ್ ಅವರಿಗೆ ಕೃಷಿ, ಶಿಕ್ಷಣ ಮತ್ತು ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ. ಮಾ.15ರಂದು ನಡೆಯುವ ಮಂಗಳೂರು ವಿವಿಯ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ-2000ದ ಪ್ರಕರಣ 69ರಡಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ಅವಕಾಶವಿರುವ ಹಿನ್ನಲೆಯಲ್ಲಿ ಕಳೆದ ಡಿಸೆಂಬರ್ 2ರಂದು ನಡೆದ ಸಿಂಡಿಕೇಟು ಸಭೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ 41ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅಪೂರ್ವ ಸಾಧಕರಿಗೆ ನೀಡಲಾಗುವ ಗೌರವ ಡಾಕ್ಟರೇಟ್ ಪದವಿಗೆ ಅರ್ಹರಾದ ವ್ಯಕ್ತಿಗಳ ಹೆಸರುಗಳನ್ನು ಅಂತಿಮಗೊಳಿಸಿ ಕುಲಾಧಿಪತಿಗಳ ಒಪ್ಪಿಗೆಗೆ ಶಿಫಾರಸು ಮಾಡಲಾಗಿತ್ತು. ಅದರಂತೆ ಸರಕಾರದ ಪತ್ರ ಸಂಖ್ಯೆ GS 07 MLM 2022(P) ದಿನಾಂಕ ಜನವರಿ 11ರಲ್ಲಿ ಕುಲಾಧಿಪತಿ ಯವರು ಅನುಮೋದನೆ ನೀಡಿರುತ್ತಾರೆ ಪ್ರೊ.ಪಿ.ಎಸ್. ಯಡಪಡಿತ್ತಾಯ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕುಲಸಚಿವರಾದ ಡಾ.ಕಿಶೋರ್ ಕುಮಾರ್ (ಆಡಳಿತ), ರಾಜುಕೃಷ್ಣ ಚಲ್ಲಣ್ಣನವರ್(ಪರೀಕ್ಷಾಂಗ), ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ ಉಪಸ್ಥಿತರಿದ್ದರು.