ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ: ತಾತ್ಕಾಲಿಕವಾಗಿ ಪತ್ರಿಭಟನೆ ಹಿಂಪಡೆದ ಮೃತ್ಯುಂಜಯ ಸ್ವಾಮೀಜಿ
ಸರಕಾರದ ಕ್ರಮದಿಂದ ಬೇಸತ್ತು ವಿಜಯಾನಂದ ಕಾಶಪ್ಪನವರ್ ರಾಜೀನಾಮೆ
ಬೆಂಗಳೂರು, ಮಾ. 25: ‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರಕಾರ ಹಿಂದುಳಿದ ವರ್ಗಗಳ 2ಡಿ ಅಡಿಯಲ್ಲಿ ಶೇ.7ರಷ್ಟು ಮೀಸಲಾತಿಯನ್ನು ನೀಡಿದೆ. ಆದರೆ, ಸಮುದಾಯಕ್ಕೆ ಶೇ.15ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಲಾಗಿತ್ತು’ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಇಷ್ಟು ವರ್ಷಗಳ ನಿರಂತರ ಹೋರಾಟದ ಪರಿಣಾಮವಾಗಿ ಪಂಚಮಸಾಲಿ ಸಮುದಾಯಕ್ಕೆ ಸ್ವಲ್ಪಮಟ್ಟಿನ ಮೀಸಲಾತಿ ನೀಡಿದ್ದಾರೆ. ನಮ್ಮ ಹೋರಾಟಕ್ಕೆ ಮೊದಲ ಹೆಜ್ಜೆಯ ಸಾಧನೆಯಾಗಿ ಶೇ.7ರಷ್ಟು ಮೀಸಲಾತಿ ಸಿಕ್ಕಿದೆ. ಹಾಗಾಗಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾವ ಸರಕಾರ ಬರಲಿದೆ ಎಂಬುದನ್ನು ನೋಡಿಕೊಂಡು ಮತ್ತೆ ಹೋರಾಟ ನಡೆಸಲಾಗುವುದು ಎಂದರು.
ಪ್ರತಿಭಟನೆ ಕುರಿತಾಗಿ ಸ್ವಾಮೀಜಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪ್ರತಿಭಟನೆ ಕೈಬಿಡಲು ನಿರ್ಧರಿಸಲಾಯಿತು. ಆದರೆ, ಇದಕ್ಕೆ ವಿಜಯಾನಂದ ಕಾಶಪ್ಪನವರ್ ವಿರೋಧ ವ್ಯಕ್ತಪಡಿಸಿದರು. ಈ ವಿಚಾರವಾಗಿ ವಿಜಯಾನಂದ ಹಾಗೂ ಯತ್ನಾಳ್ ನಡುವೆ ವಾಕ್ಸಮರವೂ ನಡೆಯಿತು.
‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರಕಾರ ಘೋಷಣೆ ಮಾಡಿರುವ ಕೇವಲ ಶೇ.7ರಷ್ಟು ಮೀಸಲಾತಿಯನ್ನು ಒಪ್ಪಲು ಸಾಧ್ಯವಿಲ್ಲ. ಇದು ಚುನಾವಣೆಗೋಸ್ಕರ ಮಾಡಿರುವ ತಂತ್ರವಾಗಿದೆ. ಮುಸ್ಲಿಮ್ ಸಮುದಾಯದ ಮೀಸಲಾತಿ ಕಸಿದು ನಮಗೆ ಕೊಟ್ಟಿದ್ದಾರೆ. ಆ ಮೂಲಕ ಮುಸ್ಲಿಮರು ಮತ್ತು ನಮ್ಮ ನಡುವೆ ಜಗಳ ತಂದಿಡುವ ಕೆಲಸವನ್ನು ಬಿಜೆಪಿ ಮಾಡಿದೆ. ಸರಕಾರದ ಈ ಕ್ರಮದಿಂದಾಗಿ ಬೇಸರಗೊಂಡು ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ’
- ವಿಜಯಾನಂದ ಕಾಶಪ್ಪನವರ್, ಮಾಜಿ ಶಾಸಕ