ಮಹಾರಾಷ್ಟ್ರ ಸರಕಾರದ ಉದ್ಧಟತನ ಸಹಿಸಲಾಗದು: ಸಿದ್ದರಾಮಯ್ಯ
ಬೆಂಗಳೂರು, ಎ.5: ಕನ್ನಡಿಗರ ತೀವ್ರ ವಿರೋಧಧ ಹೊರತಾಗಿಯೂ ರಾಜ್ಯದ ಗಡಿಯೊಳಗಿರುವ 865 ಹಳ್ಳಿಗಳಿಗೆ ಆರೋಗ್ಯ ವಿಮೆ ಜಾರಿ ಮಾಡಿರುವ ಮಹಾರಾಷ್ಟ್ರ ಸರಕಾರದ ಕ್ರಮ ಉದ್ಧಟತನದ್ದು. ಇದನ್ನು ಸಹಿಸಲು ಸಾಧ್ಯವೇ ಇಲ್ಲ. ಈ ಆದೇಶವನ್ನು ತಕ್ಷಣ ವಾಪಸ್ ಪಡೆಯದೆ ಇದ್ದರೆ ಪರಿಣಾಮ ನೆಟ್ಟಗಾಗದು ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಆರೋಗ್ಯ ವಿಮೆ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಭರವಸೆ ನೀಡಿದ್ದರು. ಇವರಿಬ್ಬರ ಮಾತಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ರಾಜ್ಯದ ಗಡಿಯೊಳಗೆ ಆರೋಗ್ಯ ವಿಮೆ ಜಾರಿಗೆ ಮಹಾರಾಷ್ಟ್ರ ಸರ್ಕಾರ ಯತ್ನಿಸಿದಾಗಲೇ ನಾವು ವಿರೋಧಿಸಿದ್ದೆವು. ಅಲ್ಲಿಯ ವರೆಗೆ ತೆಪ್ಪಗಿದ್ದ ರಾಜ್ಯದ ಮುಖ್ಯಮಂತ್ರಿ ನಮ್ಮ ಒತ್ತಡಕ್ಕೆ ಮಣಿದು ವೀರಾವೇಶದ ಮಾತುಗಳನ್ನಾಡಿದ್ದರು. ಆ ಆವೇಶ, ಬದ್ಧತೆಯನ್ನು ತೋರಿಸಬೇಕಾದ ಕಾಲ ಈಗ ಬಂದಿದೆ ಎಂದವರು ಹೇಳಿದರು.
ಗಡಿ ವಿವಾದ ಇತ್ಯರ್ಥಗೊಳ್ಳುವ ವರೆಗೆ ಎರಡೂ ರಾಜ್ಯಗಳು ವಿವಾದವನ್ನು ಕೆದಕಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಾಕೀತು ಮಾಡಿ ಎರಡೂ ರಾಜ್ಯಗಳ ಸದಸ್ಯರನ್ನೊಳಗೊಂಡ ಸಲಹಾ ಸಮಿತಿ ರಚಿಸಿದ್ದರು. ಆ ಸೂಚನೆಯನ್ನೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಧಿಕ್ಕರಿಸಿದ್ದಾರೆ. ಬೆಳಗಾವಿ ಗಡಿವಿವಾದ ನ್ಯಾಯಾಲಯದ ಕಟಕಟೆಯಲ್ಲಿದೆ. ಕನ್ನಡಿಗರಿಗೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ನಮಗೆ ಇದೆ. ಈ ನಡುವೆ ರಾಜಕೀಯ ಲಾಭದ ದುರುದ್ದೇಶದಿಂದ ಮಹಾರಾಷ್ಟ್ರ ಆಗಾಗ ಗಡಿ ತಂಟೆಯನ್ನು ಕೆದಕುವ ಕಿಡಿಗೇಡಿತನ ಮಾಡುವುದು ಖಂಡನೀಯ. ಕನ್ನಡಿಗರು ಇದನ್ನು ಸಹಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.