ವಿಧಾನಸಭೆ ಚುನಾವಣೆ: ಸಿಎಂ ಬೊಮ್ಮಾಯಿಗೆ ಬೆಂಬಲ ಘೋಷಿಸಿದ ನಟ ಸುದೀಪ್

ಬೆಂಗಳೂರು, ಎ.5: ಕನ್ನಡದ ಚಿತ್ರನಟ ಕಿಚ್ಚ ಸುದೀಪ್ ಯಾವುದೆ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಆದರೆ, ನಮ್ಮಲ್ಲಿನ ಆತ್ಮೀಯ ಸಂಬಂಧದ ಪರಿಣಾಮವಾಗಿ ಬಿಜೆಪಿ ಪರವಾಗಿ ಅವರು ವಿಧಾನಸಭಾ ಚುನಾವಣಾ ಪ್ರಚಾರ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಹೇಳಿದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸುದೀಪ್ ಪ್ರಚಾರ ಮಾಡಲಿದ್ದಾರೆ. ಸುದೀಪ್ ಬೆಂಬಲದಿಂದ ಪಕ್ಷಕ್ಕೆ ಭಾರಿ ಬೆಂಬಲ ಸಿಕ್ಕಿದಂತಾಗಿದೆ. ಅವರ ಸಮಯ ಮತ್ತು ಗೌರವವನ್ನು ಗಮನದಲ್ಲಿಟ್ಟುಕೊಂಡು ಪ್ರಚಾರದ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂದರು.
ನಟ ಸುದೀಪ್ ಮಾತನಾಡಿ, ‘ನನ್ನ ಅತ್ಯಂತ ಪ್ರೀತಿ ಪಾತ್ರರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನನ್ನ ಬೆಂಬಲ ನೀಡುತ್ತೇನೆ. ಅವರು ಸೂಚಿಸಿದ ಆಯ್ದ ಕ್ಷೇತ್ರಗಳಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಲಿದ್ದೇನೆ. ರಾಜ್ಯಾದ್ಯಂತ ಎಲ್ಲ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ನನಗೆ ಸಾಧ್ಯವಿಲ್ಲ’ ಎಂದು ಸ್ಪಷ್ಟಣೆ ನೀಡಿದರು.
‘ನಾನು ರಾಜಕೀಯ ಪ್ರವೇಶ ಮಾಡುತ್ತಿಲ್ಲ. ಇದು ಮಾನವೀಯತೆಯ ಪರವಾದ ನಿಲುವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ‘ಮಾಮ’ ಎಂದು ಸಂಬೋಧಿಸಿದ ಅವರು, ‘ನಾನು ನಮ್ಮ ಮಾಮನಿಗೋಸ್ಕರ ಬಂದಿದ್ದೇನೆ. ಅವರ ಪರವಾಗಿ ನಿಲ್ಲುತ್ತೇನೆ. ಸಿನಿಮಾ ಕ್ಷೇತ್ರ ಬಿಟ್ಟು ರಾಜಕೀಯಕ್ಕೆ ಬಂದು ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ಸ್ಪಷ್ಟವಾಗಿ ನುಡಿದರು.
ಬಸವರಾಜ ಬೊಮ್ಮಾಯಿ ಅವರು ತಿಳಿಸಿದ ಕೆಲವು ವ್ಯಕ್ತಿಗಳ ಪರವಾಗಿ ಪ್ರಚಾರ ಮಾಡಲಿದ್ದೇನೆ. ಬೊಮ್ಮಾಯಿ ಅವರು ನನ್ನ ಕಷ್ಟ ಕಾಲದಲ್ಲಿ ನೆರವಾಗಿದ್ದಾರೆ. ಆದುದರಿಂದ, ಅವರ ಪರವಾಗಿ ನಿಲ್ಲುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ನನಗೆ ಗೌರವ ಇದೆ ಎಂದು ಅವರು ತಿಳಿಸಿದರು.
ನಾನು ಯಾವುದೋ ಒತ್ತಡಕ್ಕಾಗಿ ಇಲ್ಲಿಗೆ ಬಂದಿಲ್ಲ. ಪ್ರೀತಿಗಾಗಿ ಬಂದಿದ್ದೇನೆ. ಪ್ರಚಾರದ ರೂಪುರೇಷೆಗಳು ಇನ್ನು ಸಿದ್ದವಾಗಿಲ್ಲ. ಆದರೆ, ನನ್ನ ಕಷ್ಟಗಳ ಕುರಿತು ಮುಖ್ಯಮಂತ್ರಿ ಅವರಿಗೆ ಅರಿವಿದೆ. ಅದರಂತೆ ಅವರು ಪ್ರಚಾರದ ಸ್ವರೂಪವನ್ನು ನಿರ್ಧರಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಸುದೀಪ್ ಉತ್ತರಿಸಿದರು. ಗೋಷ್ಠಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ತೋಟಗಾರಿಕೆ ಸಚಿವ ಮುನಿರತ್ನ ಉಪಸ್ಥಿತರಿದ್ದರು.

